ಉದಯವಾಹಿನಿ, ಬೆಂಗಳೂರು: ಲೋಕಸಭೆ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಯುವ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಅಖಿಲ ಭಾರತ ಯುವ ಕಾಂಗ್ರೆಸ್‍ನ ಬೃಹತ್ ಸಮಾವೇಶ ನಾಳೆಯಿಂದ ಬೆಂಗಳೂರಿನಲ್ಲಿ ಮೂರು ದಿನ ನಡೆಯಲಿದೆ.
ಉತ್ತಮ ಭಾರತದ ಅಡಿಪಾಯ ಎಂಬ ಧ್ಯೇಯ ವಾಕ್ಯದೊಂದಿಗೆ ಯುವ ಕಾಂಗ್ರೆಸ್‍ನ ರಾಜ್ಯ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರು, ಪದಾಕಾರಿಗಳು ನಗರದ ಪ್ಯಾಲೇಸ್ ಗ್ರೌಂಡ್‍ನಲ್ಲಿ ಸಮಾವೇಶಗೊಳ್ಳುತ್ತಿದ್ದಾರೆ. ಜುಲೈ 26, 27, 28ರಂದು ನಡೆಯುವ ಸಮಾವೇಶಕ್ಕಾಗಿ ಸಿದ್ಧತೆಗಳು ನಡೆದಿದೆ. ಫುಟ್‍ಪಾತ್ ಆಕ್ರಮಿಸಿ ಫ್ಲೆಕ್ಸ್, ಬ್ಯಾನರ್ ಕಟ್ಟಲು ತಯಾರಿಗಳನ್ನು ನಡೆಸಲಾಗಿದೆ.
ಸುಮಾರು ನಾಲ್ಕೂವರೆ ಸಾವಿರ ಮಂದಿ ಯುವ ಕಾರ್ಯಕರ್ತರಿಗೆ ಅದ್ಧೂರಿ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಸಭೆಯಲ್ಲಿ ಯುವ ಕಾರ್ಯಕರ್ತರಿಗೆ ನಾನಾ ರೀತಿಯ ತರಬೇತಿಗಳನ್ನು ನೀಡಲಾಗುವುದು. ಕೇಂದ್ರ ಸರ್ಕಾರದ ಅಕಾರ ದುರುಪಯೋಗ, ತನಿಖಾ ಸಂಸ್ಥೆಗಳ ದುರ್ಬಳಕೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ಚರ್ಚೆ
ನಡೆಸಲಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಸುದೀರ್ಘ ಮಾಹಿತಿ ನೀಡಲಾಗುತ್ತಿದ್ದು, ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯ ಸರ್ಕಾರ ಜನಪರ ಯೋಜನೆಗಳ ಬಗ್ಗೆಯೂ ಚರ್ಚೆಗಳಾಗಲಿವೆ ಎಂದು ಮೂಲಗಳು ತಿಳಿಸಿವೆ.
