ಉದಯವಾಹಿನಿ, ವಡೋದರಾ: ಆಲ್‌ರೌಂಡರ್ ಸಿವರ್ ಬ್ರಂಟ್ ಅವರ ಸ್ಫೋಟಕ ಶತಕದ ನೆರವಿನಿಂದ ಆರ್‌ಸಿಬಿ (RCB) ವಿರುದ್ಧ ಮುಂಬೈ ಇಂಡಿಯನ್ಸ್ 15 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಮುಂಬೈ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಗೆಲ್ಲಲೇಬೇಕಾದ ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಎಂಐ 4 ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿತ್ತು. ಕಠಿಣ ಸವಾಲನ್ನು ಬೆನ್ನಟ್ಟಿದ ಆರ್‌ಸಿಬಿ ರಿಚಾ ಘೋಷ್ ಅವರ ಸ್ಫೋಟಕ ಅರ್ಧಶತಕದ ಏಕಾಂಗಿ ಹೋರಾಟದಿಂದ 9 ವಿಕೆಟ್ ನಷ್ಟಕ್ಕೆ 184 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಆರ್‌ಸಿಬಿ 35 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಾಗಲೇ ಸೋಲು ಖಚಿತವಾಗಿತ್ತು. ಹೀಗಿದ್ದರೂ ರಿಚಾ ಘೋಷ್ ಮತ್ತು ನಾಡಿನ್ ಡಿ ಕ್ಲರ್ಕ್ 36 ಎಸೆತಗಳಲ್ಲಿ 42 ರನ್ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ನಾಡಿನ್ ಡಿ ಕ್ಲರ್ಕ್ 28 ರನ್(20 ಎಸೆತ, 3 ಬೌಂಡರಿ, 1 ಸಿಕ್ಸ್) ಹೊಡೆದರೆ ಅರುಂಧತಿ ರೆಡ್ಡಿ 14 ರನ್ ಗಳಿಸಿ ಔಟಾದರು. ಅರುಂಧತಿ ರೆಡ್ಡಿ ಎಸೆದ 19ನೇ ಓವರ್‌ನಲ್ಲಿ ರಿಚಾಘೋಷ್ ಹ್ಯಾಟ್ರಿಕ್ ಸಿಕ್ಸ್ ಮತ್ತು ಒಂಟಿ ರನ್ ಬಳಿಕ ಶ್ರೇಯಾಂಕ ಪಾಟೀಲ್ 2 ಬೌಂಡರಿ ಸಿಡಿಸಿ ಒಂದೇ ಓವರ್‌ನಲ್ಲಿ 27 ರನ್ ಬಂದಾಗ ಪಂದ್ಯಕ್ಕೆ ರೋಚಕ ತಿರುವು ಸಿಕ್ಕಿತು.
ಅಮೆಲಿಯಾ ಕೆರ್ ಎಸೆದ ಕೊನೆಯ ಓವರ್‌ನಲ್ಲಿ ಬೌಂಡರಿ, ಮೂರನೇ ಮತ್ತು ನಾಲ್ಕನೇ ಎಸೆತದಲ್ಲಿ ರಿಚಾ ಘೋಷ್ ಸಿಕ್ಸ್ ಸಿಡಿಸಿದ ಪರಿಣಾಮ ಪಂದ್ಯ ರೋಚಕ ಹಂತಕ್ಕೆ ತಿರುಗಿತ್ತು. ಆದರೆ ಕೊನೆಯ ಎಸೆತದಲ್ಲಿ ರಿಚಾ ಘೋಷ್ ಕ್ಯಾಚ್ ನೀಡಿ ಔಟಾದರು. ರಿಚಾ ಘೋಷ್ ಮತ್ತು ಶ್ರೇಯಾಂಕ ಪಾಟೀಲ್ 18 ಎಸೆತಗಳಲ್ಲಿ 55 ರನ್ ಜೊತೆಯಾಟವಾಡುವ ಮೂಲಕ ಆರ್‌ಸಿಬಿ ನೆಟ್ ರನ್ ರೇಟ್ ಕಾಪಾಡುವಲ್ಲಿ ಯಶಸ್ವಿಯಾದರು. ರಿಚಾ ಘೋಷ್ 90 ರನ್(50 ಎಸೆತ, 10 ಬೌಂಡರಿ, 6 ಸಿಕ್ಸ್) ಶ್ರೇಯಾಂಕ ಪಾಟೀಲ್ ಔಟಾಗದೇ 12 ರನ್ (5 ಎಸೆತ, 3 ಬೌಂಡರಿ) ಹೊಡೆದರು. ಮುಂಬೈ ಪರ ಹೀಲಿ ಮ್ಯಾಥ್ಯೂಸ್ 3 ವಿಕೆಟ್ ಕಿತ್ತರೆ ಶಬ್ನಿಮ್ ಇಸ್ಮಾಯಿಲ್, ಅಮೆಲಿಯಾ ಕೆರ್ ತಲಾ 2 ವಿಕೆಟ್ ಕಿತ್ತರು.
