ಉದಯವಾಹಿನಿ, ಹೈದರಾಬಾದ್(ತೆಲಂಗಾಣ): ವಿದೇಶದಲ್ಲಿ ಅಧ್ಯಯನ ಮಾಡುವುದು ಹಲವರ ಕನಸು. ಆದರೆ, ಇಂದಿನ ಯುವಜನತೆಯ ಕನಸು ಉತ್ತಮ ವಿಶ್ವವಿದ್ಯಾಲಯದಿಂದ ಪದವಿ ಪಡೆಯುವುದಾಗಿದೆ. ಇದಕ್ಕಾಗಿ ಸಾಲದ ಮೊರೆ ಹೋಗಲು ಕೂಡಾ ಅವರು ಹಿಂಜರಿಯುವುದಿಲ್ಲ. ಅದೇ ರೀತಿ, ತೆಲಂಗಾಣದ ಇಬ್ಬರು ಅವಳಿ ಸಹೋದರಿಯರು ಕಠಿಣ ಪರಿಶ್ರಮದಿಂದ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿವೇತನ ಸಹಿತ ಸೀಟು ಪಡೆದು ಅಧ್ಯಯನ ನಡೆಸುತ್ತಿದ್ದಾರೆ.
ಹೈದರಾಬಾದ್‌ನ ಲಕ್ಷ್ಯಾ ಮತ್ತು ಲಾಸ್ಯ ಅಮೆರಿಕದ ಪ್ರತಿಷ್ಠಿತ ಮಿಲ್ವಾಕೀ ಸ್ಕೂಲ್ ಆಫ್ ಎಂಜಿನಿಯರಿಂಗ್‌ನಲ್ಲಿ ಸೀಟು ಪಡೆದ ಪ್ರತಿಭಾನ್ವಿತೆಯರು. ಒಬ್ಬರು ಅಧ್ಯಕ್ಷೀಯ ವಿದ್ಯಾರ್ಥಿವೇತನ ಪಡೆಯುವ ಮೂಲಕ ಶೇ.100ರಷ್ಟು ಬೋಧನಾ ಶುಲ್ಕ ವಿನಾಯಿತಿ ಪಡೆದರೆ, ಮತ್ತೊಬ್ಬರು ಶೇ.60ರಷ್ಟು ಶುಲ್ಕ ವಿನಾಯಿತಿ ಪಡೆದಿದ್ದಾರೆ.
ವಿದ್ಯಾರ್ಥಿ ವೇತನ: ಪ್ರತಿಷ್ಟಿತ ವಿಶ್ವವಿದ್ಯಾಲಯದಲ್ಲಿ ಪದವಿ ಮಾಡಬೇಕು ಎಂಬ ಕನಸು ಕಂಡಿರುವ ಇವರು ಮಧ್ಯಂತರ ಪರೀಕ್ಷೆಗಳಿಗೆ ಅಧ್ಯಯನ ಮಾಡುವಾಗ, ಇನ್ವಿಕ್ಟಾ ಕೆರಿಯರ್ ಕನ್ಸಲ್ಟೆನ್ಸಿಯ ನಿರ್ದೇಶಕ ವಿವೇಕಾನಂದ ಮೂರ್ತಿ ಅವರ ಸಹಾಯದಿಂದ ವಿದ್ಯಾರ್ಥಿವೇತನ ಪರೀಕ್ಷೆಗೆ ತಯಾರಿ ನಡೆಸಿದ್ದರು. ಬಳಿಕ ಸ್ಯಾಟ್ ಮತ್ತು ಅಡ್ವಾನ್ಸ್ಡ್ ಪ್ಲೇಸ್‌ಮೆಂಟ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ, ಮಿಲ್ವಾಕೀ ಸ್ಕೂಲ್ ಆಫ್ ಎಂಜಿನಿಯರಿಂಗ್‌ನಲ್ಲಿ ಸೀಟು ಪಡೆದಿದ್ದಾರೆ. ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆದ ಲಕ್ಷ್ಯಾ ಯಾವುದೇ ಶುಲ್ಕ ಪಾವತಿಸದೆ ಅಧ್ಯಕ್ಷೀಯ ವಿದ್ಯಾರ್ಥಿವೇತನದ ಮೂಲಕ ಉಚಿತ ಶಿಕ್ಷಣ ಮತ್ತು ವಸತಿ ಪಡೆದಿದ್ದಾರೆ. ಲಾಸ್ಯ ಶೇ.60ರಷ್ಟು ವಿದ್ಯಾರ್ಥಿವೇತನ ಗಿಟ್ಟಿಸಿಕೊಂಡಿದ್ದಾರೆ.
ಶ್ರೀಕಾಂತ್ ಮತ್ತು ಶ್ರವಂತಿ ದಂಪತಿಯ ಪುತ್ರಿಯರಾದ ಇವರ ಹುಟ್ಟೂರು ಕೃಷ್ಣ ಜಿಲ್ಲೆಯ ಪೆದವೂರಪಾಡು. ವಿಜಯವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಇವರು, ಬಳಿಕ ಹೈದರಾಬಾದ್‌ಗೆ ಸ್ಥಳಾಂತರಗೊಂಡರು. ತಂದೆ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರೆ, ತಾಯಿ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಾರೆ. ಇವರ ಸಂಬಂಧಿಕರು ಅಮೆರಿಕದಲ್ಲಿ ನೆಲೆಸಿದ್ದರಿಂದ ಮಕ್ಕಳ ಉನ್ನತ ವಿದ್ಯಾಭ್ಯಾಸ ಅಲ್ಲೇ ನಡೆಯಲಿ ಎಂದು ಇಚ್ಛಿಸಿದ್ದರು. ಅದರಂತೆ, ಇನ್ವಿಕ್ಟಾ ಕೆರಿಯರ್ ಕನ್ಸಲ್ಟೆನ್ಸಿಯ ನಿರ್ದೇಶಕರಾದ ವಿವೇಕಾನಂದ ಮೂರ್ತಿ ಪರಿಚಯವಾಗಿ ಅಲ್ಲಿನ ಸಲಹಾ ಸಂಸ್ಥೆಗೆ ಸೇರಿಸಿದ್ದರು.
2.5 ಕೋಟಿ ರೂ ವಿದ್ಯಾರ್ಥಿವೇತನ: ಲಕ್ಷ್ಯಾ ಅವರು ಅಮೆರಿಕದ ಕಾಲೇಜು ಪ್ರವೇಶಾತಿಗಾಗಿ ನಡೆಸಲಾದ ಪ್ರಮಾಣೀಕೃತ ಪರೀಕ್ಷೆಗಳು ಮತ್ತು ಅಡ್ವಾನ್ಸ್ಡ್ ಪ್ಲೇಸ್‌ಮೆಂಟ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಕೂಡ ಅವರ ವಿದ್ಯಾರ್ಥಿವೇತನದ ಆಯ್ಕೆಗೆ ದಾರಿ ಮಾಡಿತು. ಮಿಲ್ವಾಕೀ ಸ್ಕೂಲ್ ಆಫ್ ಎಂಜಿನಿಯರಿಂಗ್ 2.5 ಕೋಟಿ ರೂ ವಿದ್ಯಾರ್ಥಿವೇತನ ಪಡೆದ ಆಕೆಯ ಎಲ್ಲಾ ಶುಲ್ಕಗಳು, ವಸತಿ ಮತ್ತು ಆಹಾರ ವೆಚ್ಚಗಳನ್ನು ಸಂಸ್ಥೆಯೇ ಭರಿಸುತ್ತಿದೆ.
ಅಮೆರಿಕದ ಹತ್ತು ಅಗ್ರ ವಿಶ್ವವಿದ್ಯಾಲಯದಲ್ಲಿ ಒಂದು ಮಿಲ್ವಾಕೀ ಸ್ಕೂಲ್ ಆಫ್ ಎಂಜಿನಿಯರಿಂಗ್. ಪ್ರಪಂಚಾದ್ಯಂತದ ವಿವಿಧ ದೇಶಗಳಿಂದ ಸುಮಾರು 500 ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಅದರಲ್ಲಿ ಲಕ್ಷ್ಯಾ ಮಾತ್ರ ಅಧ್ಯಕ್ಷೀಯ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದರು.
