ಉದಯವಾಹಿನಿ : ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಪ್ರೇಮಿಗಳಿಗೆ ಅಚ್ಚರಿಯ ಸುದ್ದಿಯೊಂದನ್ನು ನೀಡಿದ್ದಾರೆ. ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ದೂರ ಉಳಿಯಲು ನಿರ್ಧರಿಸಿರುವ ಅವರು, ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪಿಎಸ್‌ಎಲ್‌ನ 11ನೇ ಆವೃತ್ತಿಯ ಹರಾಜಿಗೂ ಮುನ್ನವೇ ಪೇಶಾವರ್ ಝಲ್ಟಿ ಫ್ರಾಂಚೈಸಿಯು ‘ಡೈರೆಕ್ಟ್ ಸೈನಿಂಗ್’ ಮೂಲಕ ಮ್ಯಾಕ್ಸ್‌ವೆಲ್ ಅವರನ್ನು ತನ್ನ ತಂಡಕ್ಕೆ ಬರಮಾಡಿಕೊಂಡಿದೆ. ಇದರೊಂದಿಗೆ ಪಾಕಿಸ್ತಾನದ ಸ್ಟಾರ್ ಆಟಗಾರ ಬಾಬರ್ ಅಜಂ ನೇತೃತ್ವದ ತಂಡದಲ್ಲಿ ಮ್ಯಾಕ್ಸ್‌ವೆಲ್ ಕಣಕ್ಕಿಳಿಯುವುದು ಖಚಿತವಾಗಿದೆ.
ಐಪಿಎಲ್‌ನಲ್ಲಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದ ಮ್ಯಾಕ್ಸ್‌ವೆಲ್, ಪಿಎಸ್‌ಎಲ್‌ನಲ್ಲಿ ತುಸು ಕಡಿಮೆ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ.
4.5 ಕೋಟಿ ಪಾಕಿಸ್ತಾನಿ ರೂಪಾಯಿ (ಭಾರತೀಯ ಮೌಲ್ಯದಲ್ಲಿ ಸುಮಾರು 1.47 ಕೋಟಿ ರೂ.).
ಕಳೆದ ಐಪಿಎಲ್‌ನಲ್ಲಿ ಅವರು ಪಂಜಾಬ್ ಕಿಂಗ್ಸ್ ಪರ 4.20 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದರು.
ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿ ಐಪಿಎಲ್‌ಗೆ ಹೆಸರು ನೋಂದಾಯಿಸುತ್ತಿಲ್ಲ ಎಂದು ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಲೀಗ್ ಅನ್ನು ಬಿಟ್ಟು, ಮೊದಲ ಬಾರಿಗೆ ಪಾಕಿಸ್ತಾನ ಲೀಗ್‌ನಲ್ಲಿ ಆಡಲು ಮುಂದಾಗಿರುವ ಅವರ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
