ಉದಯವಾಹಿನಿ, ವಾಷಿಂಗ್ಟನ್: ಎಲಾನ್ ಮಸ್ಕ್ ಒಡೆತನದಲ್ಲಿರುವ ಟ್ವಿಟರ್ನ್ ಲೋಗೊವನ್ನು ಈಗಾಗಲೇ ಬದಲಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಯಾನ್ಫ್ರಾನ್ಸಿಸ್ಕೋದಲ್ಲಿರುವ ಪ್ರಧಾನ ಕಚೇರಿಯಲ್ಲಿದ್ದ ಹಳೆಯ ಲೋಗೊವನ್ನು ತೆಗೆಯುವ ಕಾರ್ಯಕ್ಕೆ ಮಂಗಳವಾರ ಪೊಲೀಸರು ತಡೆಯೊಡ್ಡಿರುವ ಘಟನೆ ನಡೆದಿದೆ. ಅಂತಿಮವಾಗಿ ಗೊಂದಲವನ್ನು ನಿವಾರಿಸಲಾಗಿದ್ದು, ಲೋಗೋ ಬದಲಾಯಿಸಲಾಗಿದೆ.
ಸ್ಯಾನ್ಫ್ರಾನ್ಸಿಸ್ಕೋದ ಮಾರ್ಕೆಟ್ ರಸ್ತೆಯಲ್ಲಿ ಸುಮಾರು ೧೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಟ್ವಿಟರ್ ಪ್ರಧಾನ ಕಚೇರಿಯ ಎದುರುಗಡೆ ಅಳವಡಿಸಲಾಗಿರುವ ಹಳೆಯ ಲೋಗೊವನ್ನು ಅಲ್ಲಿಂದ ತೆಗೆಯುವ ಕಾರ್ಯವನ್ನು ಪೊಲೀಸರು ತಡೆದಿದ್ದಾರೆ. ಕಾರ್ಯಾಚರಣೆಗೆ ಕ್ರೇನ್ ಬಳಸಲು ಅನುಮತಿ ಪಡೆದಿರಲಿಲ್ಲ ಎಂದು ಪ್ರಾಥಮಿಕ ವರದಿ ಹೇಳಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆಯು ‘ಹಳೆಯ ಲೋಗೊ ಇದ್ದ ನಾಮಫಲಕವನ್ನು ತೆಗೆಯುವ ಕಾರ್ಯ ವಹಿಸಿಕೊಂಡ ಗುತ್ತಿಗೆದಾರ ಈ ಬಗ್ಗೆ ಕಟ್ಟಡದ ಭದ್ರತಾ ಸಿಬಂದಿ ಅಥವಾ ಮಾಲಕರಿಗೆ ಮಾಹಿತಿ ನೀಡದಿರುವುದು ಈ ಗೊಂದಲಕ್ಕೆ ಕಾರಣವಾಗಿದೆ. ಬಳಿಕ ಈ ಗೊಂದಲವನ್ನು ನಿವಾರಿಸಿ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದೆ.
