ಉದಯವಾಹಿನಿ , ಜನವರಿ 2026ರ ದತ್ತಾಂಶ ಮತ್ತು 2025–26ರ ಆರ್ಥಿಕ ಸಮೀಕ್ಷೆಯ ಪ್ರಕಾರ, ವಿಶ್ವದಲ್ಲಿ ಅತಿ ಹೆಚ್ಚು ಸರ್ಕಾರಿ ಸಾಲ ಹೊಂದಿರುವ ದೇಶ ಅಮೆರಿಕವಾಗಿದೆ. ಅಮೆರಿಕದ ಒಟ್ಟು ಸರ್ಕಾರಿ ಸಾಲವು ಸುಮಾರು 38.3 ಟ್ರಿಲಿಯನ್ ಡಾಲರ್ ಆಗಿದ್ದು, ಹೆಚ್ಚುತ್ತಿರುವ ಮಿಲಿಟರಿ ವೆಚ್ಚ ಮತ್ತು ಕಲ್ಯಾಣ ಯೋಜನೆಗಳೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗಿದೆ.
ಸಾಲದ ಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. ಚೀನಾದ ಒಟ್ಟು ಸರ್ಕಾರಿ ಸಾಲವು ಸುಮಾರು 18.7 ಟ್ರಿಲಿಯನ್ ಡಾಲರ್ ಆಗಿದೆ. ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆರ್ಥಿಕ ಉತ್ತೇಜನ ಯೋಜನೆಗಳಿಗಾಗಿ ಚೀನಾ ಭಾರೀ ಪ್ರಮಾಣದಲ್ಲಿ ಸಾಲ ಪಡೆದುಕೊಂಡಿದೆ. ಇನ್ನು ಜಪಾನ್ ಮೂರನೇ ಸ್ಥಾನದಲ್ಲಿದ್ದು, ಈ ದೇಶದ ಸರ್ಕಾರಿ ಸಾಲವು 9.8 ಟ್ರಿಲಿಯನ್ ಡಾಲರ್ ಆಗಿದೆ.
ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್) 4.1 ಟ್ರಿಲಿಯನ್ ಡಾಲರ್ ಸಾಲದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಫ್ರಾನ್ಸ್ 3.9 ಟ್ರಿಲಿಯನ್ ಡಾಲರ್ ಸಾಲದೊಂದಿಗೆ ಐದನೇ ಸ್ಥಾನದಲ್ಲಿದೆ. ಇದೇ ವೇಳೆ, ಭಾರತವು ಸುಮಾರು 3.8 ಟ್ರಿಲಿಯನ್ ಡಾಲರ್ ಸರ್ಕಾರಿ ಸಾಲದೊಂದಿಗೆ ಆರನೇ ಸ್ಥಾನದಲ್ಲಿದೆ. ಅಭಿವೃದ್ಧಿ ಯೋಜನೆಗಳು, ಜನಸಂಖ್ಯೆ ಹೆಚ್ಚಳ ಮತ್ತು ವಿವಿಧ ಸರ್ಕಾರಿ ವೆಚ್ಚಗಳು ಭಾರತದ ಸಾಲದ ಪ್ರಮಾಣ ಹೆಚ್ಚಾಗಲು ಕಾರಣವಾಗಿವೆ.
ಆರ್ಥಿಕ ತಜ್ಞರ ಪ್ರಕಾರ, ಸಾಲದ ಪ್ರಮಾಣ ಮಾತ್ರವಲ್ಲದೆ, ದೇಶದ ಆರ್ಥಿಕ ಬೆಳವಣಿಗೆ ಮತ್ತು ಸಾಲವನ್ನು ನಿರ್ವಹಿಸುವ ಸಾಮರ್ಥ್ಯವೂ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ತನ್ನ ಆರ್ಥಿಕ ಬೆಳವಣಿಗೆಯ ಮೂಲಕ ಸಾಲದ ಹೊರೆಯನ್ನು ಸಮತೋಲನದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ.
