ಉದಯವಾಹಿನಿ, : ಜನಸಂಖ್ಯಾ ಅಂಕಿಅಂಶಗಳು ಚೀನಾಕ್ಕೆ ಎಚ್ಚರಿಕೆಯ ಗಂಟೆ ಮೊಳಗಿಸುತ್ತಿವೆ. ಸತತ ನಾಲ್ಕನೇ ವರ್ಷವೂ ಚೀನಾದ ಜನಸಂಖ್ಯೆ ಕುಸಿತ ದಾಖಲಿಸಿದ್ದು, 2025ರ ಅಂತ್ಯದ ವೇಳೆಗೆ ಒಟ್ಟು ಜನಸಂಖ್ಯೆ ಸುಮಾರು 143 ಕೋಟಿಗೆ ಇಳಿದಿದೆ. ಜನನ ಪ್ರಮಾಣ ಇತಿಹಾಸದಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಜನನಗಳಿಗಿಂತ ಸಾವುಗಳ ಸಂಖ್ಯೆ ಹೆಚ್ಚಾಗಿರುವುದು ಪ್ರಮುಖ ಕಾರಣವಾಗಿದೆ.
ಇನ್ನೊಂದೆಡೆ, ಭಾರತವು ಚೀನಾವನ್ನು ಮೀರಿಸಿ ವಿಶ್ವದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಪ್ರಸ್ತುತ ಭಾರತದ ಜನಸಂಖ್ಯೆ ಸುಮಾರು 147 ಕೋಟಿ ದಾಟಿದ್ದು, ಯುವ ಜನಸಂಖ್ಯೆಯೇ ಇದರ ದೊಡ್ಡ ಶಕ್ತಿ. ತಜ್ಞರ ಪ್ರಕಾರ, ಭಾರತದ ಈ ಜನಸಂಖ್ಯಾ ಬೆಳವಣಿಗೆ ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಬಲ ನೀಡುವ ಸಾಧ್ಯತೆ ಇದೆ.
ಚೀನಾ ವೃದ್ಧ ಜನಸಂಖ್ಯೆ, ಕುಗ್ಗುತ್ತಿರುವ ಕಾರ್ಮಿಕ ಬಲ ಮತ್ತು ಕಡಿಮೆಯಾಗುತ್ತಿರುವ ಜನನ ಪ್ರಮಾಣದ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಚೀನಾದ ಒಟ್ಟು ಜನಸಂಖ್ಯೆಯ ಸುಮಾರು 23% ಆಗಿದ್ದಾರೆ. ಇದು ಕೈಗಾರಿಕೆಗಳು, ಉತ್ಪಾದನಾ ವಲಯ ಮತ್ತು ಪಿಂಚಣಿ ವ್ಯವಸ್ಥೆಗಳಿಗೆ ದೊಡ್ಡ ಹೊರೆ ಆಗುತ್ತಿದೆ.ಭಾರತದಲ್ಲಿ ಜನನ ಪ್ರಮಾಣ ನಿಧಾನವಾಗಿ ಇಳಿಯುತ್ತಿದ್ದರೂ, ಯುವ ಶಕ್ತಿ ಇನ್ನೂ ಬಹಳ ಪ್ರಬಲವಾಗಿದೆ. 15 ರಿಂದ 64 ವರ್ಷ ವಯಸ್ಸಿನವರ ಪ್ರಮಾಣ ಶೇ.68 ರಷ್ಟಿದ್ದು, ಇದು ದೇಶಕ್ಕೆ “ಡೆಮೊಗ್ರಾಫಿಕ್ ಡಿವಿಡೆಂಡ್” ಒದಗಿಸುವ ಸಾಧ್ಯತೆಯನ್ನು ತೋರಿಸುತ್ತದೆ. ಭಾರತೀಯ ಯುವಕರು ದೇಶದಲ್ಲಷ್ಟೇ ಅಲ್ಲದೆ ಜಾಗತಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ಚೀನಾದ ಜನಸಂಖ್ಯಾ ಕುಸಿತಕ್ಕೆ ಹಿಂದೆ ಜಾರಿಗೆ ತಂದಿದ್ದ ಒಂದು ಮಗು ನೀತಿ, ಜೀವನ ವೆಚ್ಚದ ಏರಿಕೆ, ಕೆಲಸದ ಒತ್ತಡ ಮತ್ತು ವಿಳಂಬಿತ ವಿವಾಹಗಳು ಪ್ರಮುಖ ಕಾರಣಗಳಾಗಿವೆ. ಸರ್ಕಾರ ತೆರಿಗೆ ರಿಯಾಯಿತಿ, ಮಕ್ಕಳ ಆರೈಕೆ ಸೌಲಭ್ಯಗಳಂತಹ ಪ್ರೋತ್ಸಾಹ ನೀಡುತ್ತಿದ್ದರೂ, ಜನನ ಪ್ರಮಾಣದಲ್ಲಿ ನಿರೀಕ್ಷಿತ ಏರಿಕೆ ಕಂಡುಬಂದಿಲ್ಲ.
ತಜ್ಞರ ಪ್ರಕಾರ, ಚೀನಾದ ಈ ಜನಸಂಖ್ಯಾ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ನಡುವೆ, ಭಾರತಕ್ಕೆ ಇದು ದೊಡ್ಡ ಅವಕಾಶವೂ ಹೌದು, ದೊಡ್ಡ ಸವಾಲೂ ಹೌದು. ಯುವ ಶಕ್ತಿಗೆ ಉದ್ಯೋಗ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಒದಗಿಸದಿದ್ದರೆ, ಈ ಜನಸಂಖ್ಯಾ ಲಾಭವೇ ಭವಿಷ್ಯದಲ್ಲಿ ಗಂಡಾಂತರವಾಗುವ ಸಾಧ್ಯತೆ ಇದೆ.
