ಉದಯವಾಹಿನಿ, ಬೆಳಗಾವಿ: ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನ ಅಪರಾಧಿಗಳಿಗೆ ಐದು ವರ್ಷ ಕಠಿಣ ಶಿಕ್ಷೆ ಪ್ರಕಟವಾಗಿದೆ. ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾ.ಎಚ್.ಎಸ್.ಮಂಜುನಾಥ ಅವರು ಅಪರಾಧಿಗಳಿಗೆ ಆಯಾ ಸೆಕ್ಷನ್ ಅಡಿ ಶಿಕ್ಷೆ ಮತ್ತು ದಂಡ ವಿಧಿಸಿದರು.
ಬಸಪ್ಪ, ರಾಜು, ಕೆಂಪಣ್ಣ, ಪಾರ್ವತಿ, ಯಲ್ಲವ್ವ, ಲಕ್ಕಪ್ಪ, ಗಂಗವ್ವ, ಸಂಗೀತಾ, ಸಂತೋಷ, ಶೋಭಾ, ಲಕ್ಕವ್ವ, ಶಿವಪ್ಪ ವನ್ನೂರಿಗೆ ಶಿಕ್ಷೆ ವಿಧಿಸಲಾಗಿದೆ.

ಕೋರ್ಟ್‌ ಶಿಕ್ಷೆ ವಿಧಿಸುತ್ತಿದ್ದಂತೆ ಅಪರಾಧಿಗಳು ಮತ್ತು ಅವರ ಕುಟುಂಬಸ್ಥರು ಕಣ್ಣೀರಿಟ್ಟರು. ವಂಟಮೂರಿ ಗ್ರಾಮದಲ್ಲಿ ಪ್ರೇಮಿಗಳು ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿದ್ದರು. ಓಡಿ ಹೋಗಿದ್ದಕ್ಕೆ ಸಿಟ್ಟಾದ ಯುವತಿ ಕಡೆಯವರು 2023ರ ಡಿಸೆಂಬರ್ 11ರಂದು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು. ಅಷ್ಟೇ ಅಲ್ಲದೇ ಯುವಕನ ಮನೆಯನ್ನೂ ಧ್ವಂಸ ಮಾಡಿದ್ದರು.

ಮಹಿಳೆ ಮೇಲೆ ಹಲ್ಲೆ ನಡೆಸಿದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಪ್ರೇಮಿಗಳು ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ವಿವಾಹವಾಗಿದ್ದರು.

Leave a Reply

Your email address will not be published. Required fields are marked *

error: Content is protected !!