ಉದಯವಾಹಿನಿ, ವಾಷಿಂಗ್ಟನ್ ಡಿಸಿ, ಅಮೆರಿಕ: ಇರಾನ್​ – ಅಮೆರಿಕ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಭೀತಿ ನಡುವೆ ತಾನು ಮಾತುಕತೆಗೆ ಸಿದ್ಧ ಎಂದು ಅಮೆರಿಕ ಘೋಷಿಸಿದೆ. ಬುಧವಾರ ಈ ಬಗ್ಗೆ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಇರಾನ್​ ಜತೆಗೆ ಮಾತುಕತೆಗೆ ಸಿದ್ಧ, ಆದರೆ ಇದನ್ನು ಇರಾನ್​ ರಿಯಾಯಿತಿ ಎಂದು ಭಾವಿಸುವಂತಿಲ್ಲ ಎಂಬ ಎಚ್ಚರಿಕೆ ಮಾತುಗಳನ್ನು ಅವರು ಸೇರಿಸಿದರು.
ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಕ್ರಿಟಿಕಲ್ ಮಿನರಲ್ಸ್ ಮಂತ್ರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಆಡಳಿತದ ಅವಧಿಯಲ್ಲಿ ಇದೇ ರೀತಿಯ ವಿಧಾನವನ್ನು ಅವಲಂಬಿಸಿದ್ದರು. ವಿರೋಧಿಗಳು ಸೇರಿದಂತೆ ಜಗತ್ತಿನ ಯಾರನ್ನಾದರೂ ಭೇಟಿ ಮಾಡಲು ಮತ್ತು ತೊಡಗಿಸಿಕೊಳ್ಳಲು ಅವರು ಸದಾ ಮುಕ್ತರಾಗಿದ್ದಾರೆ ಎಂದು ಹೇಳಿದರು.

ಅಧ್ಯಕ್ಷ ಟ್ರಂಪ್ ಜಗತ್ತಿನ ಯಾರೊಂದಿಗೂ ಮಾತನಾಡಲು, ಭೇಟಿಯಾಗಲು ಮತ್ತು ಅವರೊಂದಿಗೆ ಸಂವಹನ ನಡೆಸಲು ಸಿದ್ಧರಿದ್ದಾರೆ. ನಾವು ಸಭೆಗಳನ್ನು ಒಂದು ರಿಯಾಯಿತಿ ಎಂದು ಪರಿಗಣಿಸುವುದಿಲ್ಲ. ಯಾರೊಂದಿಗಾದರೂ, ಯಾವುದೇ ಎದುರಾಳಿಯೊಂದಿಗೂ ಮಾತುಕತೆಗೆ ಸಿದ್ಧ. ಅದು ಮಿತ್ರರೇ ಆಗಿರಲಿ ಶತ್ರುಗಳೇ ಆಗಿರಲಿ, ಅಧ್ಯಕ್ಷರು ಯಾವಾಗಲೂ ಅದಕ್ಕೆ ಮುಕ್ತರಾಗಿದ್ದಾರೆ. ಅದನ್ನು ಯಾವಾಗಲು ಅನುಸರಿಸಿದ್ದಾರೆ. ಅನುಸರಿಸುತ್ತಾರೆ ಮತ್ತು ಹಾಗೆಯೇ ನಡೆದುಕೊಂಡಿದ್ದಾರೆ ಎಂದು ರುಬಿಯೊ ಹೇಳಿದರು.

ಇರಾನ್​ ಆಡಳಿತದ ಮುಖ್ಯಸ್ಥರೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಅವಕಾಶವಿದ್ದರೆ, ಅಮೆರಿಕ ಅದಕ್ಕೂ ಕೂಡ ಮುಕ್ತವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

ಅರ್ಥಪೂರ್ಣ ಮಾತುಕತೆಗಳಿಗೆ ಏನು ಅಗತ್ಯ ಎಂಬುದನ್ನು ವಿವರಿಸಿದ ಮಾರ್ಕ್​ ರುಬಿಯೊ, ಇರಾನ್‌ನೊಂದಿಗಿನ ಯಾವುದೇ ಚರ್ಚೆಗಳನ್ನು ಮಾಡಬೇಕೆಂದರೆ, ಟೆಹ್ರಾನ್‌ನ ಕ್ಷಿಪಣಿ ಕಾರ್ಯಕ್ರಮ, ಭಯೋತ್ಪಾದಕ ಸಂಘಟನೆಗಳ ಪ್ರಾಯೋಜಕತ್ವ, ಪರಮಾಣು ಕಾರ್ಯಕ್ರಮ ಮತ್ತು ತನ್ನದೇ ಆದ ಜನರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅವರು ಪರಿಹರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಆರ್ಥಿಕ ಸಮಸ್ಯೆಗಳಿಂದಲೇ ಇಸ್ಲಾಮಿಕ್ ಗಣರಾಜ್ಯ ಇರಾನ್​​ ನಲ್ಲಿ ಪ್ರತಿಭಟನೆಗಳು ನಡೆಯಲು ಕಾರಣ ಎಂಬುದನ್ನು ಅವರು ಗಮನಿಸಿದರು.ಇರಾನ್ ನಾಯಕತ್ವವು ತನ್ನ ನಾಗರಿಕರ ಜೀವನ ಮಟ್ಟವನ್ನು ಸುಧಾರಿಸುವ ಬದಲು ಭಯೋತ್ಪಾದನೆ ಮತ್ತು ಪ್ರಾಕ್ಸಿ ಗುಂಪುಗಳನ್ನು ಪ್ರಾಯೋಜಿಸಲು ದೇಶದ ಸಂಪನ್ಮೂಲಗಳನ್ನು ಖರ್ಚು ಮಾಡುತ್ತಿದೆ ಎಂದು ಇದೇ ವೇಳೆ ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!