ಉದಯವಾಹಿನಿ, ಬಳ್ಳಾರಿ: ಅಕ್ರಮವಾಗಿ ಯೂರಿಯಾ ಗೊಬ್ಬರ ಸ್ಟಾಕ್ ಇಟ್ಟಿದ್ದ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಬಳ್ಳಾರಿ ನಗರದ ಹೊರವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ಸರ್ಕಾರದಿಂದ ಬಂದಿದ್ದ ಯೂರಿಯಾ ಗೊಬ್ಬರ ಸ್ಟಾಕ್ ಮಾಡಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಹುನ್ನಾರ ನಡೆಸಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿದ್ದಾರೆ.

ಇಂಡಸ್ಟ್ರಿಯಲ್ ಏರಿಯಾದ ಎಡ್ವಿನ್ ಎನ್ನುವ ವ್ಯಕ್ತಿಗೆ ಸೇರಿದ್ದ ಗೋಡೌನ್‌ನಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಚೀಲ ಯೂರಿಯಾ ಗೊಬ್ಬರ ಸಂಗ್ರಹಿಸಿಡಲಾಗಿತ್ತು.
ಸದ್ಯ ಗೋಡೌನ್ ಮಾಲೀಕನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಮೂಲಕ ಬಳ್ಳಾರಿಯಲ್ಲಿ ಯೂರಿಯಾ ಸ್ಟಾಕ್ ಮಾಡುವ ಜಾಲ ಸಕ್ರಿಯವಾಗಿದೆ ಅನ್ನೋದು ಬೆಳಕಿಗೆ ಬಂದಿದೆ. ರೈತರಿಗೆ ಸೇರಬೇಕಾದ ಯೂರಿಯಾ ಗೊಬ್ಬರವನ್ನ ಹೆಚ್ಚಿನ ದರಕ್ಕೆ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಹುನ್ನಾರ ನಡೆಸಲಾಗಿದೆ ಎಂಬ ಶಂಕೆಯಿದೆ. ಸದ್ಯಕ್ಕೆ ಬಳ್ಳಾರಿಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇಲ್ಲ. ಟಿಬಿ ಡ್ಯಾಂ ಗೇಟ್ ರಿಪೇರಿ ಹಿನ್ನೆಲೆ ಬಳ್ಳಾರಿಯಲ್ಲಿ ಬಹುತೇಕ ರೈತರು ಎರಡನೇ ಬೆಳೆ ಬೆಳೆದಿಲ್ಲ. ಹಾಗಾದರೆ ಯೂರಿಯಾ ಗೊಬ್ಬರ ಯಾಕಾಗಿ ಸ್ಟಾಕ್ ಮಾಡಿದ್ರು ಅನ್ನೊ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಜೂನ್ ತಿಂಗಳ ಮುಂಗಾರು ವೇಳೆ ಯೂರಿಯಾ ಗೊಬ್ಬರಕ್ಕೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಹೀಗಾಗಿ ಈಗಿನಿಂದಲೇ ಸ್ಟಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!