ಉದಯವಾಹಿನಿ, ನೂಕ್ (ಗ್ರೀನ್‌ಲ್ಯಾಂಡ್): ಆರ್ಕಿಟಿಕ್ ದ್ವೀಪ ರಾಷ್ಟ್ರದ ಮೇಲೆ ಅಮೆರಿಕವು ತನ್ನ ಹಿಡಿತ ಸಾಧಿಸಲು ಯತ್ನ ತೀವ್ರಗೊಳಿಸಿರುವ ಬೆನ್ನಲ್ಲೇ, ನ್ಯಾಟೊ ಮಿತ್ರ ರಾಷ್ಟ್ರವಾದ ಗ್ರೀನ್‌ಲ್ಯಾಂಡ್‌ನ ಬೆಂಬಲ ಸೂಚಿಸುವ ಭಾಗವಾಗಿ ಕಾನ್ಸುಲೆಟ್‌ ಕಚೇರಿಗಳನ್ನು ತೆರೆಯಲು ಕೆನಡಾ ಹಾಗೂ ಫ್ರಾನ್ಸ್ ನಿರ್ಧರಿಸಿವೆ. ಕೆನಡಾ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರು ನೂಕ್‌ಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಸ್ಥಾಪಿಸಿರುವ ಕಾನ್ಸುಲೆಟ್ ಕಚೇರಿ ಉದ್ಘಾಟಿಸಲಿದ್ದಾರೆ. ಅನಿತಾ ಅವರ ಜೊತೆಗೆ ಕೆನಡಾದ ಗವರ್ನರ್ ಜನರಲ್ ಮೇರಿ ಸೈಮನ್ ಕೂಡ ಜೊತೆಗಿದ್ದರು.
ಜೀನ್ ನೊಯಲ್ ಅವರು ಗ್ರೀನ್‌ಲ್ಯಾಂಡ್‌ನ ಕಾನ್ಸುಲ್ ಜನರಲ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಫ್ರಾನ್ಸ್‌ನ ವಿದೇಶಾಂಗ ಸಚಿವಾಲಯವು ತಿಳಿಸಿದೆ. ಆ ಮೂಲಕ ಯುರೋಪ್‌ನ ರಾಷ್ಟ್ರವೊಂದು ಮೊದಲ ಬಾರಿಗೆ ಇಲ್ಲಿ ಕಾನ್ಸುಲೆಟ್‌ ಜನರಲ್ ಕಚೇರಿ ತೆರೆದಂತಾಗಿದೆ.
‘ಗ್ರೀನ್‌ಲ್ಯಾಂಡ್‌ ಜೊತೆಗೆ ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸಹಕಾರದ ಜೊತೆಗೆ ರಾಜಕೀಯ ಬಲಪಡಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದೆ.
ಗ್ರೀನ್‌ಲ್ಯಾಂಡ್‌ನಲ್ಲಿ ಕಾನ್ಸುಲೆಟ್ ಕಚೇರಿ ಆರಂಭಿಸಲು 2024ರಲ್ಲೇ ಕೆನಡಾ ನಿರ್ಧರಿಸಿತ್ತು, ಆದರೆ ಇಡೀ ದೇಶವನ್ನು ವಶಕ್ಕೆ ಪಡೆಯುವ ಕುರಿತು ಟ್ರಂಪ್ ನೀಡಿದ್ದ ಹೇಳಿಕೆ ಹಾಗೂ ನವೆಂಬರ್‌ನಲ್ಲಿ ಉಂಟಾದ ಪ್ರತಿಕೂಲ ಹವಾಮಾನದಿಂದ ಕಚೇರಿ ಆರಂಭಿಸುವ ಪ್ರಕ್ರಿಯೆ ವಿಳಂಬವಾಗಿತ್ತು. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಗ್ರೀನ್‌ಲ್ಯಾಂಡ್‌ನಲ್ಲಿ ರಾಜತಾಂತ್ರಿಕ ಕಚೇರಿ ಆರಂಭಿಸುವುದಾಗಿ ಕಳೆದ ಜೂನ್ ತಿಂಗಳಲಿ ಘೋಷಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!