ಉದಯವಾಹಿನಿ, ಜೈಸಲ್ಮೇರ್ (ರಾಜಸ್ಥಾನ): ವೃದ್ಧ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಬರೋಬ್ಬರಿ 6 ಕೆಜಿ ತೂಕದ ಗಡ್ಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಸರ್ಕಾರಿ ಜವಾಹರ್ ಆಸ್ಪತ್ರೆಯಲ್ಲಿ ಈ ವಿಶೇಷ ಶಸ್ತ್ರಚಿಕಿತ್ಸೆ ನಡೆದಿದೆ. ಭಾರತ – ಪಾಕಿಸ್ತಾನ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮವೊಂದರ 60 ವರ್ಷದ ಮಹಿಳೆಯೇ ಈ ಶಸ್ತ್ರಚಿಕಿತ್ಸೆಗೆ ಒಳಗಾದವರು. ಕಳೆದ ಮೂರು ತಿಂಗಳುಗಳಿಂದ ಈ ಮಹಿಳೆ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಮಕ್ಕಳಿಗೆ ಏಕೆ ತೊಂದರೆ ಕೊಡಬೇಕು ಎಂದು ದಿನಗಳನ್ನು ದೂಡುತ್ತಲೇ ಬಂದಿದ್ದರು. ಆದರೆ, ಇತ್ತೀಚೆಗೆ ಹೊಟ್ಟೆ ನೋವು ಹಾಗೂ ಸುಸ್ತಾಗುತ್ತಿರುವ ಬಗ್ಗೆ ಮನೆಯವರಿಗೆ ಹೇಳಿದ್ದರು. ದಿನದಿಂದ ದಿನಕ್ಕೆ ಊತ ಹೆಚ್ಚಾಗುತ್ತಿರುವುದನ್ನು ಮಕ್ಕಳು ಸಹ ಗಮನಿಸಿದ್ದರು.
ಈ ಹಿನ್ನೆಲೆಯಲ್ಲಿ ಮನೆಯವರು ವೃದ್ಧ ಮಹಿಳೆಯನ್ನು ತಮ್ಮ ಗ್ರಾಮದಿಂದ 150 ಕಿ.ಮೀ ದೂರದಲ್ಲಿರುವ ಜೈಸಲ್ಮೇರ್ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ವೈದ್ಯರು ತಪಾಸಣೆ ನಡೆಸಿದಾಗ ಆಕೆಯ ಹೊಟ್ಟೆಯಲ್ಲಿ ಭಾರಿ ಗಾತ್ರದ ಗಡ್ಡೆ ಕಾಣಿಸಿಕೊಂಡಿರುವುದನ್ನು ದೃಢಪಡಿಸಿದ್ದರು. ಆಸ್ಪತ್ರೆಯ ಡಾ. ಸತ್ತಾ ರಾಮ್ ಪನ್ವಾರ್ ಅವರು ಪರೀಕ್ಷೆಯ ಸಮಯದಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಇಷ್ಟು ದೊಡ್ಡ ಗಡ್ಡೆ ಇರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು.ಆಕೆಯ ಹೊಟ್ಟೆ ಬಹುತೇಕ ಗಡ್ಡೆಗಳಿಂದ ತುಂಬಿದ್ದರಿಂದ ಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ ಮಹಿಳೆಯ ಹೊಟ್ಟೆಯಲ್ಲಿ ಬೆರಳಿನಷ್ಟು ಜಾಗ ಉಳಿದಿರಲಿಲ್ಲ. ಅಂತಹ ಸ್ಥಿತಿಯಲ್ಲಿ ರೋಗಿಯ ಬದುಕುಳಿಯುವುದೇ ಒಂದು ಅದ್ಭುತವಾಗಿತ್ತು. ಡಾ. ಪನ್ವರ್ ಅಗತ್ಯವಿರುವ ಎಲ್ಲ ಪರೀಕ್ಷೆಗಳನ್ನು ನಡೆಸಿ ಸುಮಾರು ಏಳು ದಿನಗಳ ಹಿಂದೆ ಅಪಾಯಕಾರಿ ಶಸ್ತ್ರಚಿಕಿತ್ಸೆ ಮಾಡಿದರು. ಈ ಗಡ್ಡೆಯೂ ಹೊಟ್ಟೆ ತುಂಬಾ ಬೆಳೆದಿದ್ದರಿಂದ ಶಸ್ತ್ರಚಿಕಿತ್ಸೆ ಬಹಳ ಕ್ಲಿಷ್ಟಕರವಾಗಿತ್ತು. ಬಹಳ ನಾಜೂಕಿನಿಂದ ಶಸ್ತ್ರಚಿಕಿತ್ಸೆ ನಿಭಾಯಿಸಬೇಕಿತ್ತು.
