ಉದಯವಾಹಿನಿ, ನವದೆಹಲಿ: ಲೋಕಸಭೆಯ ಬಜೆಟ್ ಅಧಿವೇಶನದ ಕಲಾಪದಲ್ಲಿ ಭಾರತ- ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಕುರಿತು ಆಡಳಿತ ಮತ್ತು ವಿಪಕ್ಷಗಳ ನಡುವೆ ಗದ್ದಲದ ನಡುವೆ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ವಜಾಗೊಳಿಸುವಂತೆ ಬಿಜೆಪಿ ಗುರುವಾರ (ಫೆ.12) ನಿರ್ಣಯ ಮಂಡಿಸಿದೆ. ರಾಹುಲ್ ಗಾಂಧಿ, ಭಾರತ- ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿ, ಮೋದಿ ದೇಶವನ್ನೇ ಮಾರಿದ್ದು, ಅಮೆರಿಕದ ಒತ್ತಡಕ್ಕೆ ಸಂಪೂರ್ಣವಾಗಿ ಶರಣಾಗಿರುವುದಾಗಿ ಕಿಡಿ ಕಾರಿದ್ದರು.
ಇದೀಗ ಬಿಜೆಪಿ ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿ ನೋಟಿಸ್ ಅನ್ನು ಲೋಕಸಭೆ ಕಾರ್ಯದರ್ಶಿಗೆ ಸಲ್ಲಿಸಿದೆ. ಆದರೆ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಿಲ್ಲ ಎಂದು ವರದಿ ತಿಳಿಸಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದೇಶದ ಜನರ ದಿಕ್ಕು ತಪ್ಪಿಸುವ ಆರೋಪ ಹೊರಿಸಿದ್ದು, ಈ ನಿಟ್ಟಿನಲ್ಲಿ ರಾಹುಲ್ ವಿರುದ್ಧ ಗುರುವಾರ ಸದಸ್ಯತ್ವ ರದ್ದು ಕುರಿತು ಮನವಿ ಮಾಡುವುದಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಗುರುವಾರ ಕಲಾಪ ಆರಂಭಕ್ಕೂ ಮೊದಲು ತಿಳಿಸಿದ್ದಾರೆ.
