ಉದಯವಾಹಿನಿ, ಕಂಕೇರ್(ಛತ್ತೀಸ್‌ಗಢ): ಅಂದು ಬಂದೂಕು ಹಿಡಿದ ಕೈಗಳಿವು. ಅದೇ ಕೈಗಳಲ್ಲಿ ಇಂದು ಹೊಲಿಗೆ ಯಂತ್ರಗಳು ವೇಗವಾಗಿ ಕೆಲಸ ಮಾಡುತ್ತಿವೆ. ಬಾಂಬ್ ಮತ್ತು ಗನ್‌ಪೌಡರ್ ತಯಾರಿಸಿದ ಕೈಗಳು, ಡ್ರಮ್ ಮತ್ತು ಹಾರ್ಮೋನಿಯಂ ನುಡಿಸುತ್ತಿವೆ. ಹಿಂಸೆ ಮತ್ತು ಭಯೋತ್ಪಾದನೆಯ ಹಾದಿಯಲ್ಲಿ ನಡೆಯುತ್ತಿದ್ದ ನಕ್ಸಲರು ಈಗ ಸ್ವಾಭಿಮಾನದ ಸ್ವಯಂ ಉದ್ಯೋಗಕ್ಕೆ ಅಣಿಯಾಗುತ್ತಿದ್ದಾರೆ. ಛತ್ತೀಸ್‌ಗಢ ಸರ್ಕಾರದ ಹೊಸ ನಕ್ಸಲ್ ಪುನರ್ವಸತಿ ನೀತಿ ಈ ಬದಲಾವಣೆಗೆ ಕಾರಣವಾಗಿದೆ.
ಶರಣಾದ ನಕ್ಸಲರು ಹಿಂಸೆ ತೊರೆದು ಕೌಶಲದ ಹಾದಿ ಹಿಡಿದಿದ್ದಾರೆ. ನಕ್ಸಲ್ ಪುನರ್ವಸತಿ ನೀತಿ-2025ರಡಿ 40 ನಕ್ಸಲರು ಕಂಕೇರ್‌ನ ಭಾನುಪ್ರತಾಪುರ ಬ್ಲಾಕ್‌ನ ಚೌಗೆಲ್ ಶಿಬಿರದಲ್ಲಿ ಸ್ವಯಂ ಉದ್ಯೋಗ ಶುರುಮಾಡಲು ತರಬೇತಿ ಪಡೆಯುತ್ತಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ಮರಳುತ್ತಿರುವ ಇವರಿಗೆ ಸಮಾಜ ಮತ್ತು ತಮ್ಮ ಕುಟುಂಬಗಳಿಗೆ ಏನಾದರೂ ಮಾಡುವ ಬಯಕೆ. ಸರ್ಕಾರದ ಯೋಜನೆಯಡಿ ಸಾಧ್ಯವಿರುವ ಎಲ್ಲ ಸಹಾಯವೂ ಸಿಗುತ್ತಿದೆ. ಶರಣಾದ ನಕ್ಸಲರಿಗೆ ಅವರ ಆಶಯದಂತೆಯೇ ಕೌಶಲ್ಯ ಅಭಿವೃದ್ಧಿ ಕೋರ್ಸ್ ನಡೆಯುತ್ತಿದೆ.
ಕೌಶಲ್ಯ ಅಭಿವೃದ್ಧಿ ಕೋರ್ಸ್ ಪೂರ್ಣಗೊಳಿಸಿದ ಬಳಿಕ ಮಾಜಿ ನಕ್ಸಲರು ತಮ್ಮದೇ ಉದ್ಯೋಗ ಪ್ರಾರಂಭಿಸಿ, ಹೊಸ ಬದುಕು ಪ್ರಾರಂಭಿಸಬೇಕು ಎಂಬುದು ಸರ್ಕಾರದ ಆಶಯ. ಇದಕ್ಕೆ ಅನುಗುಣವಾಗಿ ಚೌಗೆಲ್ ಗ್ರಾಮದ ಮುಲ್ಲಾ ಶಿಬಿರದಲ್ಲಿ ಶರಣಾಗಿರುವ ಎಲ್ಲ ನಕ್ಸಲರು ಹಿಂಸೆಯನ್ನು ಪೂರ್ಣವಾಗಿ ದೂರವಿಟ್ಟು ಶಾಂತಿಯಿಂದ ಬದುಕುವ ಕಲೆ ಕಲಿಯುತ್ತಿದ್ದಾರೆ. ಕೌಶಲ್ಯ ಅಭಿವೃದ್ಧಿ ಕೋರ್ಸ್ ತೆಗೆದುಕೊಂಡ ಮಾಜಿ ಮಾವೋಗಳು ತಾವು ಹಿಂಸೆ ಮತ್ತು ಗುಂಡಿನ ದಾಳಿಗಳಿಂದ ಹೊರಬಂದಿದ್ದೇವೆ ಎಂಬುದನ್ನು ಖುಷಿಯಿಂದ ಹೇಳುತ್ತಾರೆ.
ಈ ಶಿಬಿರದಲ್ಲಿ ಶರಣಾದ ಮಹಿಳೆಯರು ಮತ್ತು ಪುರುಷರು ವಾಹನ ಚಾಲನೆ, ಹೊಲಿಗೆ, ಕಸೂತಿ, ಮರಗೆಲಸ, ಎಲೆಕ್ಟ್ರಿಕಲ್‌ನಂತಹ ವಿವಿಧ ವೃತ್ತಿಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತರಬೇತಿಯ ನಂತರ ತಮ್ಮ ಸ್ವಂತ ಕಾಲಿನ ಮೇಲೆ ನಿಂತು, ತಮ್ಮ ಕುಟುಂಬಗಳಿಗೆ ಶಿಕ್ಷಣ ನೀಡುತ್ತಾ, ಗೌರವಯುತ ಜೀವನ ನಡೆಸುವಂತೆ ಪ್ರೇರೇಪಿಸಲಾಗುತ್ತಿದೆ.
ವರ್ಷಗಳಿಂದ ‘ಕೆಂಪು ಭಯೋತ್ಪಾದನೆ’ಯಿಂದ ಬಳಲುತ್ತಿರುವ ಬಸ್ತಾರ್ ವಿಭಾಗ ಈಗ ತ್ವರಿತಗತಿಯ ಅಭಿವೃದ್ಧಿಯ ಹಾದಿಯಲ್ಲಿದೆ. ಶಸ್ತ್ರಾಸ್ತ್ರವನ್ನು ಜತೆಗೇ ಇಟ್ಟುಕೊಂಡಿದ್ದ ಇವರು ಅರಣ್ಯ ತೊರೆದು ತಮ್ಮ ಕೌಶಲ್ಯಗಳನ್ನು ಕಲಿಯಲು ಶಿಬಿರಕ್ಕೆ ತೆರಳುತ್ತಿದ್ದಾರೆ. ಹೀಗಾಗಿ, ಚೌಗೆಲ್ ಗ್ರಾಮದ ಶಿಬಿರದ ಆವರಣ ಒಂದು ರೀತಿಯಲ್ಲಿ ‘ಕೌಶಲ್‌ಗಢ’ವಾಗಿಯೇ ಬದಲಾಗಿದೆ.
1ರಿಂದ 8ನೇ ತರಗತಿಯವರೆಗೆ ಕೋರ್ಸ್‌ಗಳನ್ನೂ ಇಲ್ಲಿ ನಡೆಸಲಾಗುತ್ತಿದೆ. ಶರಣಾದ ನಕ್ಸಲರಿಗೂ ತಮ್ಮ ಮಕ್ಕಳು ಓದು, ಬರೆಯಲು ಕಲಿಯಬೇಕೆಂಬ ಆಸೆ ಇದೆ. ಮಾಜಿ ನಕ್ಸಲರನ್ನು 20-20 ಬ್ಯಾಚ್‌ಗಳಾಗಿ ವಿಂಗಡಿಸಿ ಕೌಶಲ್ಯಪೂರ್ಣರನ್ನಾಗಿಸಲು ತರಬೇತಿ ನೀಡಲಾಗುತ್ತಿದೆ.
ಶರಣಾದ ನಕ್ಸಲ 40 ವರ್ಷ ವಯಸ್ಸಿನ ಮನ್ಹರ್ ತಾರಮ್ ಅವರು ನಾಲ್ಕು ಚಕ್ರಗಳ ವಾಹನ ಚಾಲನೆ ತರಬೇತಿ ಪಡೆಯುತ್ತಿದ್ದಾರೆ. ಕಳೆದೆರಡು ವಾರಗಳಿಂದ ಇವರಿಗೆ ತರಬೇತಿ ನೀಡಲಾಗುತ್ತಿದೆ. ನಾನು ಪೂರ್ಣ ಆಸಕ್ತಿಯಿಂದ ಕಲಿಯುತ್ತಿದ್ದೇನೆ ಎನ್ನುವ ಇವರಿಗೆ, ಸ್ಟೀರಿಂಗ್, ಕ್ಲಚ್, ಬ್ರೇಕ್ ಮತ್ತು ಆ್ಯಕ್ಸಿಲರೇಟರ್ ಅನ್ನು ಹೇಗೆ ಬಳಸಬೇಕೆಂದು ತರಬೇತುದಾರರು ಕಲಿಸುತ್ತಿದ್ದಾರೆ. ವಾಹನ ಚಲಾಯಿಸುವ ನನ್ನ ಬಯಕೆ ಈಗ ಈಡೇರುತ್ತಿದೆ ಎಂಬುದು ಅವರ ಮಾತು.
