ಉದಯವಾಹಿನಿ, ನವದೆಹಲಿ: ಮುಂಗಾರು ಅಧಿವೇಶನ ಮುಗಿಯುವವರೆಗೂ ರಾಜ್ಯಸಭೆಯ ಕಲಾಪದಿಂದ ಅಮಾನತುಗೊಂಡಿರುವ ಎಎಪಿ ಸಂಸದ ಸಂಜಯ್ ಸಿಂಗ್ ಅವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ಬೆಂಬಲ ಘೋಷಿಸಿದರು. ಸೋನಿಯಾ ಗಾಂಧಿ ಅವರು ಸಂಸತ್ ಪ್ರವೇಶಕ್ಕೂ ಮುನ್ನ ಸಂಜಯ್ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸಿದರು.
ಮಣಿಪುರ ವಿಚಾರವಾಗಿ ಕಲಾಪದಲ್ಲಿ ಪದೇ ಪದೇ ಅನುಚಿತ ವರ್ತನೆ ತೋರಿದ್ದರಿಂದ ಸಭಾಪತಿ ಜಗದೀಪ್ ಧನಕರ್ ಅವರು, ಸಿಂಗ್ ಅವರನ್ನು ಕಲಾಪದಿಂದ ಅಮಾನತುಗೊಳಿಸಿದ್ದಾರೆ. ಇದನ್ನು ಖಂಡಿಸಿ ಸಂಸತ್ ಆವರಣದಲ್ಲಿ ಸಿಂಗ್ ಧರಣಿ ನಡೆಸುತ್ತಿದ್ದಾರೆ.
ಸಿಂಗ್ ಅವರಿಗೆ ಈಗಾಗಲೇ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಹಲವು ನಾಯಕರ ಬೆಂಬಲ ದೊರೆತಿದೆ.
