ಉದಯವಾಹಿನಿ, ತುಮಕೂರು : ತಾಲೂಕಿನ ಗೂಳೂರು ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದಾಗ ಶಾಲೆಯ ಬಾಗಿಲಿಗೆ ಸಿಲುಕಿ 1ನೇ ತರಗತಿಯ ಬಾಲಕಿಯ ಎರಡು ಕೈ ಬೆರಳುಗಳು ತುಂಡಾಗಿರುವ ಘಟನೆ ನಡೆದಿದೆ. ಚಿನ್ಮಯಿದೇವಿ ಬೆರಳು ಕಳೆದುಕೊಂಡ ವಿದ್ಯಾರ್ಥಿನಿ. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವ ವೇಳೆ ಚಿನ್ಮಯಿದೇವಿ ಎಂಬ ಪುಟ್ಟ ಬಾಲಕಿ ಇತರ ವಿದ್ಯಾರ್ಥಿಗಳಂತೆ ಊಟಕ್ಕಾಗಿ ಸರತಿಯ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ಬಾಲಕಿ ಆಕಸ್ಮಿಕವಾಗಿ ಶಾಲೆಯ ಬಾಗಿಲಿಗೆ ಕೈ ಇಟ್ಟುಕೊಂಡು ನಿಂತಿದ್ದಳು ಎನ್ನಲಾಗಿದೆ. ಅದೇ ಸಮಯದಲ್ಲಿ 3ನೇ ತರಗತಿಯ ವಿದ್ಯಾರ್ಥಿ, ಅಕಸ್ಮಾತ್ ಆಗಿ ಬಾಗಿಲನ್ನು ಜೋರಾಗಿ ತಳ್ಳಿದ ಪರಿಣಾಮ, ಬಾಗಿಲಿನ ಸಂದಿಯಲ್ಲಿ ಸಿಲುಕಿ ಬಾಲಕಿಯ ಎರಡು ಬೆರಳುಗಳು ತುಂಡಾಗಿವೆ ಎನ್ನಲಾಗಿದೆ.
ಘಟನೆ ನಡೆದ ತಕ್ಷಣ ಗಾಬರಿಗೊಂಡ ಶಾಲಾ ಸಿಬ್ಬಂದಿ, ಸರಿಯಾದ ಪ್ರಥಮ ಚಿಕಿತ್ಸೆ ಅಥವಾ ತುರ್ತು ಆಸ್ಪತ್ರೆಗೆ ದಾಖಲಿಸುವ ಬದಲು, ಪೋಷಕರಿಗೆ ಕರೆ ಮಾಡಿ ಮಗುವನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಾಲೆಗೆ ಕಳುಹಿಸಿದ ಮಗು ಸುರಕ್ಷಿತವಾಗಿ ಇರಬೇಕಿತ್ತು, ಆದರೆ ಶಾಲೆಯ ಅಸಡ್ಡೆಯಿಂದಾಗಿ ನಮ್ಮ ಮಗು ಬೆರಳು ಕಳೆದುಕೊಂಡಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ತುಂಡಾಗಿ ಬಿದ್ದಿದ್ದ ಬೆರಳನ್ನು ಶಾಲೆಯ ಸಿಬ್ಬಂದಿ ಗುಡಿಸಿ ಬಿಸಾಡಿದ್ದಾರೆ ಎಂದು ಆರೋಪಿಸಿಲಾಗಿದೆ. ಬೆರಳುಗಳು ಇದ್ದಿದ್ದರೆ ಜೋಡಿಸಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ.
