ಉದಯವಾಹಿನಿ, ನವದೆಹಲಿ: ಪ್ರಧಾನ ಮಂತ್ರಿ ಕಚೇರಿ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಕ್ಯಾಬಿನೆಟ್ ಸಚಿವಾಲಯ ಒಳಗೊಂಡ ‘ಸೇವಾ ತೀರ್ಥ’ ನೂತನ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು. ಈ ಮೂಲಕ ಈವರೆಗಿನ ಬ್ರಿಟಿಷ್ ಕಾಲದ ಕಟ್ಟಡಕ್ಕೆ ಅಂತ್ಯ ಹಾಡಿದರು.
ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಾಣವಾಗಿರುವ ಹೊಸ ಸಂಕೀರ್ಣದಲ್ಲಿ ‘ಸೇವಾ ತೀರ್ಥ’ ನಾಮಫಲಕ ಅನಾವರಣಗೊಳಿಸುವ ಜೊತೆಗೆ ಕಟ್ಟಡವನ್ನು ಪ್ರಧಾನಿ ಮೋದಿ ಅವರು ಇಂದು ಉದ್ಘಾಟಿಸಿದರು. ಈ ಕಟ್ಟಡದ ಗೋಡೆ ‘ನಾಗರಿಕರು ದೇವರಿಗೆ ಸಮಾನ’ (ನಾಗರಿಕ ದೇವೋ ಭವ) ಎಂಬ ಧ್ಯೇಯವಾಕ್ಯವನ್ನು ಕೆತ್ತಲಾಗಿದೆ.
ಈ ಸಂರ್ಕೀಣದ ಉದ್ಘಾಟನೆ ಮೂಲಕ ಈವರೆಗೆ ಬ್ರಿಟಿಷ್ ಕಾಲದ ಕಟ್ಟಡಗಳಲ್ಲಿದ್ದ ಪ್ರಧಾನಿ ಕಚೇರಿಯೂ ಸೇರಿದಂತೆ ವಿವಿಧ ಸಚಿವಾಲಯಗಳು, ರಾಷ್ಟ್ರೀಯ ಭದ್ರತಾ ಸಚಿವಾಲಯವೂ ಈ ‘ಸೇವಾ ತೀರ್ಥ’ದಲ್ಲಿ ಇಂದಿನಿಂದ ಕಾರ್ಯ ನಿರ್ವಹಿಸಲಿವೆ. ಸೇವಾ ತೀರ್ಥ ಸಂಕೀರ್ಣದ ಉದ್ಘಾಟನೆಯು ಭಾರತದ ಆಡಳಿತ ವಾಸ್ತುಶಿಲ್ಪದಲ್ಲಿ ಒಂದು ಪರಿವರ್ತನಾ ಮೈಲಿಗಲ್ಲಾಗಲಿದೆ. ಜೊತೆಗೆ ಆಧುನಿಕ, ದಕ್ಷ ಮತ್ತು ಜನ ಪರ ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವ ಪ್ರಧಾನ ಮಂತ್ರಿಯವರ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಪಿಎಂಒ ಪ್ರತಿಪಾದಿಸಿದೆ.

ಹಲವು ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಸಚಿವಾಲಯಗಳು ದಶಕಗಳಿಂದ ಸೆಂಟ್ರಲ್ ವಿಸ್ಟಾ ಪ್ರದೇಶದ ವಿವಿಧ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಇದರಿಂದ ಅಸಮರ್ಥತೆ, ಸಮನ್ವಯ ಸವಾಲುಗಳು, ನಿರ್ವಹಣಾ ವೆಚ್ಚಗಳ ಏರಿಕೆ ಮತ್ತು ಕಳಪೆ ಕೆಲಸ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈಗ ಹೊಸ ಸಂಕೀರ್ಣವು ಆಧುನಿಕತೆಯೊಂದಿಗೆ ಆಡಳಿತಾತ್ಮಕ ಕಾರ್ಯಗಳನ್ನು ಕ್ರೋಢೀಕರಿಸುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಪ್ರಧಾನಿ ಕಚೇರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!