
ಉದಯವಾಹಿನಿ, ಔರಾದ್ :ಇದೇ ಜುಲೈ 31ರಂದು ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಭಾಲ್ಕಿ ಶ್ರೀಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಆಹ್ವಾನಿಸಿದೆ.ಈಚೇಗೆ ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲನಲ್ಲಿ ಬಸವಕಲ್ಯಾಣದ ಅನುಭವ ಮಂಟಪ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಶ್ರೀಗಳಾದ ಗುರುಬಸವ ಪಟ್ಟದ್ದೇವರಿಗೆ ಸತ್ಕರಿಸುವ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.ಈ ವೇಳೆ ಡಾ. ಬಸವಲಿಂಗ ಪಟ್ಟದ್ದೇವರು, ಮಾತನಾಡಿ ಪ್ರತಿಯೊಂದರಲ್ಲೂ ಒಂದಿಷ್ಟು ಭ್ರಷ್ಟಾಚಾರ ಅಥವಾ ಪಕ್ಷಪಾತವಿರುವ ಈ ಕಾಲಮಾನದಲ್ಲಿಯೂ ಕನಿಷ್ಠ ಬದ್ಧತೆ ಉಳಿದಿರುವ ಏಕೈಕ ರಂಗವೆಂದರೆ ಅದು ಪತ್ರಿಕಾರಂಗ ಮಾತ್ರವಾಗಿದೆ ಎಂದರು. ಸಾರ್ವಜನಿಕವಾಗಿ ಯಾವುದೇ ಸಮಸ್ಯೆ ಕಂಡುಬಂದರೆ ಅದನ್ನು ಬೆಳಕಿಗೆ ತರುವುದೇ ಪತ್ರಕರ್ತರು. ಅವರ ಹದ್ದಿನ ಕಣ್ಣಿನ ವರದಿಗಳು ಅದೆಷ್ಟೋ ಸಮಸ್ಯೆಗಳನ್ನು ಪರಿಹರಿಸಿವೆ. ಪತ್ರಕರ್ತರಿಗೆ ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಬೇಕಿದೆ ಎಂದರು. ಔರಾದ್ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಭರವಸೆ ನೀಡಿದರು. ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಅವರಿಗೆ ಶ್ರೀಗಳು ಸತ್ಕರಿಸಿ, ಶುಭಹಾರೈಸಿದರು. ಪ್ರಮುಖರಾದ ಹಿರಿಯ ಪತ್ರಕರ್ತ ಶರಣಪ್ಪ ಚಿಟಮೇ, ಮನ್ಮಥ ಸ್ವಾಮಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ, ಕಮಲನಗರ ತಾಪಂ ಇಒ ಶಿವಕುಮಾರ ಘಾಟೆ, ಅನಿಲ್ ಹಾಲಕೊಡೆ ಸೇರಿದಂತೆ ಇತರರಿದ್ದರು.
