
ಉದಯವಾಹಿನಿ ದೇವರಹಿಪ್ಪರಗಿ:ಜಿಲ್ಲೆಯಲ್ಲಿ ಅವ್ಯಾಹತ ಮಳೆಯಾಗುತ್ತಿದ್ದರೂ, ಶಾಲಾ ಕಾಲೇಜುಗಳಿಗೆ ರಜೆ ನೀಡುವ ವಿಚಾರದಲ್ಲಿ ಆಡಳಿತ ಯಂತ್ರ ಕೈಗೊಂಡ ನಿರ್ಧಾರ ಸಾಕಷ್ಟು ಗೊಂದಲಗಳಿಗೆ ಕಾರಣವಾಯಿತು.
ಜಿಲ್ಲೆಯಲ್ಲಿ ಮಳೆಯ ಸ್ಥಿತಿಗತಿ ನೋಡಿಕೊಂಡು ಸ್ವತಃ ಜಿಲ್ಲಾಧಿಕಾರಿಗಳಾದ ಟಿ ಭೂಬಾಲನ್ ಅವರು ಗುರುವಾರ ಒಂದು ದಿನದ ರಜೆ ಘೋಷಣೆಯನ್ನು ಪ್ರಕಟಣೆ ಹೊರಡಿಸಿದ್ದರು.
ಮಂಗಳವಾರ ಬೆಳಗ್ಗೆ ತಡವಾಗಿ ರಜೆ ಘೋಷಣೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪಾಲಕ-ಪೋಷಕರ ಗೊಂದಲಕ್ಕೆ ಕಾರಣವಾಯಿತು. ಅಷ್ಟೊತ್ತಿಗೆ ಕೆಲ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು ಇನ್ನು ಕೆಲ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸಬೇಕೆ ಇಲ್ಲವೇ ಎನ್ನುವ ಗೊಂದಲದಲ್ಲಿ ಇದ್ದ ಪಾಲಕರಿಗೆ ರಜೆ ನೀಡಿದ ಕಾರಣ ನಿಟ್ಟುಸಿರು ಬಿಟ್ಟರು. ಇನ್ನು ಕೆಲ ಶಾಲೆಗಳು ಮಧ್ಯಾಹ್ನದವರೆಗೆ ಪ್ರಾರಂಭ ಮಾಡಿ ರಜೆ ಘೋಷಣೆ ಮಾಡಿದರು.
*ತಾಲೂಕಿನಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ*
ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ 24 ಗಂಟೆಯಲ್ಲಿ ಮಳೆಯಾದ ವಿವರ ಮಳೆ ಮಾಪನದಲ್ಲಿ ದಾಖಲಾಗಿದೆ. ದೇವರಹಿಪ್ಪರಗಿ ಪಟ್ಟಣದಲ್ಲಿ 28.2ಮಿ.ಮೀ, ಕೊಂಡಗೂಳಿ ಗ್ರಾಮದಲ್ಲಿ 30.5ಮಿ.ಮೀ ಹಾಗೂ ಕಡ್ಲೆವಾಡ ಗ್ರಾಮದ ಮಳೆ ಮಾಪನದಲ್ಲಿ 23.8ಮಿ.ಮೀ ದಾಖಲಾಗಿದೆ ಎಂದು ವರದಿಯಾಗಿದೆ.
