
ಉದಯವಾಹಿನಿ, ಹಾಸನ: ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಫೆ.12 ರಂದು ರಾತ್ರಿ ಕುಣಿಗಲ್‌ನಿಂದ ಚಿಕ್ಕಮಗಳೂರಿಗೆ ಬಂದಿದ್ದ ಬೇಲೂರು ತಾಲೂಕಿನ, ಮತ್ತಾವರ ಗ್ರಾಮದ ಮಹಿಳೆ ಪ್ರಿಯಾಂಕ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಳು. ಕಲ್ಕೆರೆ ಗ್ರಾಮದ ಬಳಿ ಆಕೆಯ ಒಳುಉಡುಪು, ವ್ಯಾನಿಟಿ ಬ್ಯಾಗ್, ವೇಲ್, ಟಾಪ್ ಪತ್ತೆಯಾಗಿದ್ದವು. ಇದನ್ನು ಕಂಡ ಆಕೆಯ ಕುಟುಂಬಸ್ಥರು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ, ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ. ಪೊಲೀಸರು ದೂರು ಸ್ವೀಕರಿಸಲಿಲ್ಲ ಎಂದು ಆರೋಪಗಳ ಸುರಿಮಳೆಗೈದಿದ್ದರು. ಪ್ರಕರಣವನ್ನು ಸವಲಾಗಿ ಸ್ವೀಕರಿಸಿದ ಎಸ್ಪಿ ಶುಭನ್ವಿತಾ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಿದ್ದರು.
ತನಿಖೆಗಿಳಿದ ಪೊಲೀಸರು ಪ್ರಿಯಾಂಕ ಕಾಲ್ ಡಿಟೇಲ್ಸ್ ಹಾಗೂ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ್ದ ವೇಳೆ ಹಲವು ಮಾಹಿತಿಗಳು ಸಿಕ್ಕಿದ್ದವು. ಇದನ್ನೇ ಆಧರಿಸಿ ಕುಣಿಗಲ್‌ಗೆ ತೆರಳಿದ ಕೆ.ಆರ್.ಪುರಂ ಪೊಲೀಸ್ ಠಾಣೆ ಪಿಎಸ್‌ಐ ವಿನಯ್‌ಕುಮಾರ್ ನೇತೃತ್ವದ ತಂಡ ಫೆ.14ರ ರಾತ್ರಿ ರಾತ್ರಿ ಪ್ರಿಯಾಂಕ ಆಕೆಯ ಪ್ರಿಯಕರ ಪಶ್ಚಿಮಬಂಗಾಳ ಮೂಲದ ಡೇವಿಡ್ ಮನೆಯಲ್ಲಿ ಆತನೊಂದಿಗೆ ಸಿಕ್ಕಿಬಿದ್ದಿದ್ದಳು. ಇಂದು ಹಾಸನದ ಡಿವೈಎಸ್‌ಪಿ ಗಂಗಾಧರಪ್ಪ ಅವರು ಇಬ್ಬರನ್ನು ಕಚೇರಿಗೆ ಕರೆ ತಂದು ವಿಚಾರಣೆ ನಡೆಸಿದ ವೇಳೆ ಸಿನಿಮಾ ಕಥೆಗೂ ಮೀರಿಸುವ ರೀತಿ ಪ್ರಿಯಾಂಕ ಹೆಣೆದಿದ್ದ ಕಥೆ ಹೊರಬಿದ್ದಿದೆ.
