ಉದಯವಾಹಿನಿ, : ಭಾರತ ಸರ್ಕಾರವು ಚೀನಾದಿಂದ ಬರುವ ವಿದೇಶಿ ನೇರ ಹೂಡಿಕೆ ಮೇಲಿನ ಕೆಲವು ನಿಯಮಗಳನ್ನು ಸಡಿಲಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ವರದಿ ಹೊರಬಂದಿದೆ. 2020ರಲ್ಲಿ ಜಾರಿಗೆ ತಂದ “ಪ್ರೆಸ್ ನೋಟ್ 3” ನಿಯಮದಡಿ, ಚೀನಾ ಸೇರಿದಂತೆ ಗಡಿಭಾಗದ ರಾಷ್ಟ್ರಗಳಿಂದ ಬರುವ ಎಲ್ಲಾ ಹೂಡಿಕೆಗಳಿಗೆ ಸರ್ಕಾರದ ಪೂರ್ವಾನುಮತಿ ಕಡ್ಡಾಯ ಮಾಡಲಾಗಿತ್ತು. ಈಗ ಸಣ್ಣ ಪ್ರಮಾಣದ ಹೂಡಿಕೆಗಳಿಗೆ ಕೆಲವು ಸಡಿಲಿಕೆ ನೀಡುವ ಸಾಧ್ಯತೆ ಪರಿಶೀಲನೆಯಲ್ಲಿದೆ.
ಏಪ್ರಿಲ್ 2020ರಲ್ಲಿ ಗಡಿ ಉದ್ವಿಗ್ನತೆ ಹೆಚ್ಚಾದ ಸಂದರ್ಭದಲ್ಲಿ ಈ ಕಟ್ಟುನಿಟ್ಟಿನ ನಿಯಮ ಜಾರಿಗೆ ಬಂದಿತ್ತು. ಆ ಸಮಯದಲ್ಲಿ ಭಾರತೀಯ ಕಂಪನಿಗಳನ್ನು ವಿದೇಶಿ ಸ್ವಾಧೀನದಿಂದ ರಕ್ಷಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿರುವ ಹಿನ್ನೆಲೆ, ಸಣ್ಣ ಹೂಡಿಕೆಗಳನ್ನು ಸ್ವಯಂಚಾಲಿತ ಮಾರ್ಗದ ಮೂಲಕ ಅನುಮತಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ವರದಿಗಳು ಹೇಳುತ್ತವೆ.ಸರ್ಕಾರ “ಡಿ ಮಿನಿಮಿಸ್” ಮಿತಿಯನ್ನು ನಿಗದಿಪಡಿಸುವ ಯೋಚನೆಯಲ್ಲಿ ಇದೆ. ಅಂದರೆ, ನಿರ್ದಿಷ್ಟ ಸಣ್ಣ ಮೊತ್ತದೊಳಗಿನ ಚೀನೀ ಹೂಡಿಕೆಗಳಿಗೆ ದೀರ್ಘ ಅನುಮೋದನೆ ಪ್ರಕ್ರಿಯೆಯಿಂದ ವಿನಾಯಿತಿ ಸಿಗಬಹುದು. ಆದರೆ ದೊಡ್ಡ ಹಾಗೂ ಕಾರ್ಯತಂತ್ರದ ಹೂಡಿಕೆಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಣೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಕೆಲವು ಭಾರತೀಯ ಕಂಪನಿಗಳು ಚೀನಾದ ಕಂಪನಿಗಳೊಂದಿಗೆ ಜಂಟಿ ಉದ್ಯಮಗಳಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿವೆ. ಅವರ ಪ್ರಕಾರ, ಚೀನಾದ ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿ ಭಾರತದಲ್ಲಿ ಉತ್ಪಾದನೆ ಹೆಚ್ಚಿಸಲು ಸಹಾಯಕವಾಗಬಹುದು. ಜಂಟಿ ಉದ್ಯಮಗಳಲ್ಲಿ ಚೀನೀ ಕಂಪನಿಗಳಿಗೆ ಗರಿಷ್ಠ 26% ಪಾಲು ನೀಡುವ ಮಧ್ಯಮ ಮಾರ್ಗವನ್ನೂ ಉದ್ಯಮ ವಲಯ ಸೂಚಿಸಿದೆ.“ಮೇಕ್ ಇನ್ ಇಂಡಿಯಾ” ಅಭಿಯಾನವನ್ನು ಬಲಪಡಿಸಲು ವಿದೇಶಿ ಹೂಡಿಕೆ ಉಪಯುಕ್ತವಾಗಬಹುದು ಎಂಬ ಅಭಿಪ್ರಾಯವೂ ಇದೆ. JPMorgan Chase ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಸಾಜಿದ್ ಚಿನೋಯ್ ಅವರು, ಸರಕುಗಳ ಮೇಲೆ ಸುಂಕ ವಿಧಿಸುವುದಕ್ಕಿಂತ ಹೂಡಿಕೆಗೆ ಅವಕಾಶ ನೀಡುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಚೀನೀ ಕಂಪನಿಗಳು ಭಾರತದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿದರೆ, ಉದ್ಯೋಗ ಸೃಷ್ಟಿ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಬಹುದು ಎಂದು ಅವರು ಹೇಳಿದ್ದಾರೆ.
