ಉದಯವಾಹಿನಿ, ಬ್ರೆಡ್​ನಿಂದ ವಿವಿಧ ರೀತಿಯ ಸ್ವೀಟ್​ಗಳನ್ನು ತಯಾರಿಸಲಾಗುತ್ತದೆ. ಬರ್ಫಿ, ಹಲ್ವಾ, ಡಬಲ್ ಕಾ ಮೀಠಾ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಬ್ರೆಡ್​​ನಿಂದ ತಯಾರಿಸಲಾಗುತ್ತದೆ. ನೀವು ಎಂದಾದರೂ ಬ್ರೆಡ್​ನಿಂದ ರಸಮಲೈ ತಯಾರಿಸಿ ಸೇವಿಸಿದ್ದೀರಾ? ಹಾಗಾದರೆ, ಈ ರಸಮಲೈ ಅನ್ನು ತಯಾರಿಸಬಹುದು. ಈ ಸ್ವೀಟ್​ ರೆಸಿಪಿಯನ್ನು ಈ ರೀತಿ ಸಿದ್ಧಪಡಿಸಿದರೆ, ಸಾಕು ಬಾಯಲ್ಲಿಟ್ಟರೆ ಕರಗಿ ಹೋಗುತ್ತದೆ. ಇದಲ್ಲದೇ ಈ ರಸಮಲೈ ಅನ್ನು ತಯಾರಿಸುವುದು ಕೂಡ ತುಂಬಾ ಸುಲಭವಾಗಿದೆ. ನೀವು ಬ್ರೆಡ್, ಪನೀರ್ ಹಾಗೂ ಹಾಲಿನ ಪದಾರ್ಥಗಳೊಂದಿಗೆ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಇದಲ್ಲದೇ ಸಿರಪ್ ಮಾಡುವ ಅಗತ್ಯವೂ ಕೂಡ ಇಲ್ಲ.

ಮನೆಯಲ್ಲಿ ಸಿಹಿತಿಂಡಿಗಳನ್ನು ಸೇವಿಸಬೇಕೆಂದು ನಿಮಗೆ ಅನಿಸಿದಾಗಲೆಲ್ಲಾ ಈ ರೆಸಿಪಿಯನ್ನು ಪ್ರಯತ್ನಿಸಬಹುದು. ಹೊಸಬರು ಕೂಡ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಸಖತ್​ ರುಚಿಕರ ರಸಮಲೈ ಅನ್ನು ಸುಲಭವಾಗಿ ತಯಾರಿಸಬಹುದು. ಈ ರೀತಿಯಾಗಿ ಸಿದ್ಧಪಡಿಸಿದರೆ, ಮನೆ ಎಲ್ಲಾ ಸದಸ್ಯರು ಖುಷಿಯಿಂದ ಸವಿಯುತ್ತಾರೆ. ನಿಮ್ಮ ಸ್ನೇಹಿತರು ಇಲ್ಲವೇ ಸಂಬಂಧಿಕರು ಮನೆಗೆ ಬಂದಾಗ ಈ ರಸಮಲೈ ರೆಸಿಪಿಯನ್ನು ಟ್ರೈ ಮಾಡಿ ಸಖತ್​ ಆಗಿರುತ್ತದೆ. ಇದೀಗ ಬಾಯಲ್ಲಿ ನೀರೂರಿಸುವ ರಸಮಲೈ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಬ್ರೆಡ್ ಪೀಸ್​ – 4
ತುರಿದ ಪನೀರ್ – ಅರ್ಧ ಕಪ್
ಹಾಲಿನ ಪುಡಿ – ಅರ್ಧ ಕಪ್
ಸಕ್ಕರೆ ಪುಡಿ – 8 ಟೀಸ್ಪೂನ್
ಕಾಯಿಸಿ ಆರಿಸಿದ ಹಾಲು – ಅರ್ಧ ಕಪ್
ಹಳದಿ ಆಹಾರ ಬಣ್ಣ – ಒಂದು ಚಿಟಿಕೆ
ಫ್ರೆಶ್ ಕ್ರೀಮ್ – 2 ಟೀಸ್ಪೂನ್
ಡ್ರೈ ಫ್ರೂಟ್ಸ್ – 2 ಟೀಸ್ಪೂನ್

ಬಾಯಲ್ಲಿಟ್ಟರೆ ಕರಗುವಂತಹ ತುಂಬಾ ರುಚಿಕರವಾದ ರಸಮಲೈ ಸಿದ್ಧಪಡಿಸಲು ಮೊದಲಿಗೆ, ನಾಲ್ಕು ಬ್ರೆಡ್ ಪೀಸ್​ ತೆಗೆದುಕೊಂಡು ಅಂಚುಗಳನ್ನು ಚಾಕುವಿನಿಂದ ಕತ್ತರಿಸಿ.
ಬಳಿಕ ಇವುಗಳನ್ನು ತುಂಡುಗಳಾಗಿ ಒಡೆದು ಮಿಕ್ಸರ್ ಜಾರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ. ಪನೀರ್ ಅನ್ನು ಅಗತ್ಯವಿರುವ ಪ್ರಮಾಣದಲ್ಲಿ ಕತ್ತರಿಸಿ.ಇದೀಗ ಮಿಕ್ಸಿಂಗ್ ಬೌಲ್‌ನಲ್ಲಿ ರುಬ್ಬಿದ ಬ್ರೆಡ್ ಪುಡಿ ಹಾಗೂ ಅರ್ಧ ಕಪ್ ತುರಿದ ಪನೀರ್ ಸೇರಿಸಿ. ಅಲ್ಲದೇ ಎರಡು ಟೀಸ್ಪೂನ್ ಹಾಲಿನ ಪುಡಿ ಮತ್ತು ನಾಲ್ಕು ಟೀಸ್ಪೂನ್ ಸಕ್ಕರೆ ಪುಡಿಯನ್ನು ಸೇರಿಸಿ ಮತ್ತು ಚಪಾತಿ ಹಿಟ್ಟಿನಂತೆ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಸಣ್ಣ ಉಂಡೆಗಳನ್ನು ಮಾಡಿ ಪಕ್ಕಕ್ಕೆ ಇಡಿ.
ಮತ್ತೊಂದು ಬಟ್ಟಲಿನಲ್ಲಿ, ಅರ್ಧ ಕಪ್ ಕುದಿಸಿ ತಣ್ಣಗಾದ ಹಾಲು, ಉಳಿದ ಹಾಲಿನ ಪುಡಿ, ನಾಲ್ಕು ಟೀಸ್ಪೂನ್ ಸಕ್ಕರೆ ಪುಡಿ, ಒಂದು ಚಿಟಿಕೆ ಹಳದಿ ಆಹಾರ ಬಣ್ಣವನ್ನು ಸೇರಿಸಿ ಮತ್ತು ಯಾವುದೇ ಉಂಡೆಗಳಿಲ್ಲದೆ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಎರಡು ಟೀಸ್ಪೂನ್ ಫ್ರೆಶ್ ಕ್ರೀಮ್ ಸೇರಿಸಿ ಮಿಶ್ರಣ ಮಾಡಿ.
ಇದೀಗ ಅಗಲವಾದ ಮಿಕ್ಸ್​ ಬೌಲ್​ನಲ್ಲಿ ನೀವು ಮೊದಲು ತಯಾರಿಸಿದ ಪನೀರ್ ಬ್ರೆಡ್ ತುಂಡುಗಳನ್ನು ಇರಿಸಿ. ನಂತರ ನೀವು ಮೊದಲು ತಯಾರಿಸಿದ ಹಾಲಿನ ಮಿಶ್ರಣವನ್ನು ಇವುಗಳ ಮೇಲೆ ಸುರಿಯಿರಿ. ಬಳಿಕ, ಎರಡು ಟೀಸ್ಪೂನ್ ಡ್ರೈ ಫ್ರೂಟ್ಸ್ ಸೇರಿಸಿ ಹಾಗೂ ಅದರ ಮೇಲೆ ಅಲಂಕರಿಸಿ ಎರಡು ಗಂಟೆಗಳ ಕಾಲ ಪಕ್ಕಕ್ಕೆ ಇಡಿ.

Leave a Reply

Your email address will not be published. Required fields are marked *

error: Content is protected !!