ಉದಯವಾಹಿನಿ, ನ್ಯೂಯಾರ್ಕ್: ರಷ್ಯಾ ಹಾಗೂ ಚೀನಾ ರಾಜತಾಂತ್ರಿಕ ಸಂಬಂಧಗಳಿಗೆ ಸಂಬಂಧಿಸಿದಂತೆ ಅಮೆರಿಕಾ ಗುಪ್ತಚರ ಇಲಾಖೆಯು ವರ್ಗೀಕರಿಸದ ಆಘಾತಕಾರಿ ವರದಿ ಬಹಿರಂಗಪಡಿಸಿದೆ. ಪಾಶ್ಚಿಮಾತ್ಯ ನಿರ್ಬಂಧಗಳಿಂದ ಪಾರಾಗಲು ರಷ್ಯಾಕ್ಕೆ ಚೀನಾ ಸಹಾಯ ಮಾಡುತ್ತಿದ್ದು, ಉಕ್ರೇನ್‌ನಲ್ಲಿ ಬಳಸಲು ಮಿಲಿಟರಿ ಮತ್ತು ದ್ವಿ-ಬಳಕೆಯ ತಂತ್ರಜ್ಞಾನವನ್ನು ಒದಗಿಸುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ. ರಾಷ್ಟ್ರೀಯ ಗುಪ್ತಚರ ನಿರ್ದೇಶಕರ (ಒಡಿಐಎನ್) ಕಚೇರಿಯ ಮೌಲ್ಯಮಾಪನವನ್ನು ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಪರ್ಮನೆಂಟ್ ಸೆಲೆಕ್ಟ್ ಕಮಿಟಿ ಆನ್ ಇಂಟೆಲಿಜೆನ್ಸ್ ಪ್ರಕಟಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಒಡಿಐಎನ್, ಅಂತಾರಾಷ್ಟ್ರೀಯ ನಿರ್ಬಂಧಗಳು ಮತ್ತು ರಫ್ತು ನಿಯಂತ್ರಣಗಳ ಹೊರತಾಗಿಯೂ, ಉಕ್ರೇನ್‌ನಲ್ಲಿ ಯುದ್ಧವನ್ನು ಮುಂದುವರಿಸಲು ರಷ್ಯಾಗೆ ಮಿಲಿಟರಿ ಬಳಸುವ ಕೆಲವು ದ್ವಿ-ಬಳಕೆಯ ತಂತ್ರಜ್ಞಾನವನ್ನು ಚೀನಾ ಒದಗಿಸುತ್ತಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪೆನಿಗಳು ನ್ಯಾವಿಗೇಷನ್ ಉಪಕರಣಗಳು, ಜ್ಯಾಮಿಂಗ್ ತಂತ್ರಜ್ಞಾನ ಮತ್ತು ಫೈಟರ್ ಜೆಟ್ ಭಾಗಗ
ಳನ್ನು ರಷ್ಯಾದ ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪೆನಿಗಳಿಗೆ ರವಾನಿಸುವುದನ್ನು ಕಸ್ಟಮ್ ದಾಖಲೆಗಳು ತೋರಿಸುತ್ತಿವೆ. ಅದರಲ್ಲೂ ಉಕ್ರೇನ್ ಮೇಲೆ ದಾಳಿಯ ನಂತರ ಚೀನಾವು ರಷ್ಯಾ ಮತ್ತಷ್ಟು ಪ್ರಮುಖ ಪಾಲುದಾರ ದೇಶವಾಗಿದೆ ಚೀನಾ ಮತ್ತು ರಷ್ಯಾ ಚೀನಾದ ಯುವಾನ್ ಕರೆನ್ಸಿಯಲ್ಲಿ ನೆಲೆಗೊಂಡ ದ್ವಿಪಕ್ಷೀಯ ವ್ಯಾಪಾರದ ಪಾಲನ್ನು ಹೆಚ್ಚಿಸಿವೆ ಮತ್ತು ಎರಡೂ ದೇಶಗಳ ಹಣಕಾಸು ಸಂಸ್ಥೆಗಳು ತಮ್ಮ ದೇಶೀಯ ಪಾವತಿ ವ್ಯವಸ್ಥೆಗಳ ಬಳಕೆಯನ್ನು ವಿಸ್ತರಿಸುತ್ತಿವೆ. ಹಿಂದೆ ಯುರೋಪ್ ರಾಷ್ಟ್ರಗಳಿಗೆ ತೆರಳುತ್ತಿದ್ದ ತೈಲ ಮತ್ತು ಅನಿಲ ಸೇರಿದಂತೆ ರಷ್ಯಾ ಇಂಧನ ರಫ್ತುಗಳ ಆಮದನ್ನು ಚೀನಾ ಸದ್ಯ ಹೆಚ್ಚಿಸಿದೆ.
