ಉದಯವಾಹಿನಿ, ಬೀಜಿಂಗ್: ಈಗಾಗಲೇ ತೈವಾನ್‌ನಲ್ಲಿ ಆರ್ಭಟವನ್ನು ಸೃಷ್ಟಿಸಿ ಸಾವಿರಾರು ಮನೆಗಳ ಧ್ವಂಸ ಮಾಡಿರುವ ಡೊಕ್ಸುರಿ ಚಂಡಮಾರುತ ಇಂದು ಮುಂಜಾನೆ ಚೀನಾದ ಆಗ್ನೇಯ ಫುಜಿಯಾನ್ ಪ್ರಾಂತ್ಯಕ್ಕೆ ಅಪ್ಪಳಿಸಿದ್ದು, ಸಹಜವಾಗಿಯೇ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿದ್ದು, ಮರಗಳು ಸೇರಿದಂತೆ ವಿದ್ಯುತ್ ಕಂಬಗಳು ನೆಲಕ್ಕಪ್ಪಳಿಸಿವೆ.
ಚಂಡಮಾರುತವು ಜಿನ್‌ಜಿಯಾಂಗ್ ನಗರಕ್ಕೆ ಸ್ಥಳೀಯ ಸಮಯ ಸುಮಾರು ೧೦ ಗಂಟೆಗೆ ಅಪ್ಪಳಿಸಿದೆ ಎಂದು ಚೀನಾದ ಸಿಸಿಟಿವಿ ವರದಿ ಮಾಡಿದೆ. ಸದ್ಯ ಇದು ಕ್ರಮೇಣ ದುರ್ಬಲಗೊಳ್ಳುತ್ತಿರುವ ತೀವ್ರತೆಯೊಂದಿಗೆ ವಾಯುವ್ಯ ದಿಕ್ಕಿನಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ತೈವಾನ್‌ಗೆ ಅಪ್ಪಳಿಸಿದ್ದ ಡೊಕ್ಸುರಿ ಚಂಡಮಾರುತದ ಪರಿಣಾಮ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಭಾರೀ ಹಾನಿ ಉಂಟಾಗಿದೆ. ಸಾವಿರಕ್ಕೂ ಹೆಚ್ಚಿನ ಮರಗಳು ಧರಾಶಾಹಿಯಾಗಿದ್ದು, ೨ ಲಕ್ಷಕ್ಕೂ ಅಧಿಕ ಮನೆಗಳು ವಿದ್ಯುತ್ ವ್ಯತ್ಯಯಗೊಂಡ ಹಿನ್ನೆಲೆಯಲ್ಲಿ ಎಲ್ಲೆಡೆ ಕತ್ತಲೆ ಆವರಿಸಿದೆ. ಚಂಡಮಾರುತ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಶಾಲೆಗಳಿಗೆ ಹಲವು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಅಲ್ಲದೆ ತೈವಾನ್‌ನ ಹವಾಮಾನ ವರದಿಯು ಡೋಕ್ಸುರಿಯನ್ನು ಎರಡನೇ ಪ್ರಬಲ ಚಂಡಮಾರುತದ ಮಟ್ಟ ಎಂದು ವರ್ಗೀಕರಿಸಿದೆ. ತೈವಾನ್‌ನ ಪ್ರಮುಖ ಬಂದರು ನಗರವಾದ ಕಾಹ್‌ಸಿಯುಂಗ್‌ನಲ್ಲಿ ನೂರಾರು ಮರಗಳು ಧರಾಶಾಹಿಯಾಗಿದೆ. ಇಲ್ಲಿ ಭೂಕುಸಿತಗಳು ಮತ್ತು ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿದೆ. ದ್ವೀಪದ ಪೂರ್ವ ಮತ್ತು ದಕ್ಷಿಣ ಭಾಗದ ಪರ್ವತ ಪ್ರದೇಶಗಳಲ್ಲಿ ೧ ಮೀ ಗಿಂತಲೂ ಹೆಚ್ಚಿನ ಮಳೆ ದಾಖಲಾಗಿದೆ. ಅಲ್ಲದೆ ೩೦೦ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಯಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ದಕ್ಷಿಣ ಮತ್ತು ಪೂರ್ವ ತೈವಾನ್ ನಡುವಿನ ರೈಲ್ವೆ ಸೇವೆಗಳನ್ನು ರದ್ದುಗೊಳಿಸಲಾಗಿದೆ.

 

Leave a Reply

Your email address will not be published. Required fields are marked *

error: Content is protected !!