ಉದಯವಾಹಿನಿ, ವಿಶ್ವಸಂಸ್ಥೆ: ಪಶ್ಚಿಮ ದಂಡೆಯ ಮೇಲಿನ ನಿಯಂತ್ರಣ ಬಿಗಿಗೊಳಿಸಲು ಇಸ್ರೇಲ್ ನಡೆಸುತ್ತಿರುವ ಪ್ರಯತ್ನವನ್ನು ಖಂಡಿಸುವ ಸಂಬಂಧ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಗೆ ಭಾರತ ಸೇರಿದಂತೆ 100 ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳು ಸಹಿ ಮಾಡಿವೆ. ಇಸ್ರೇಲ್ ನ ಕ್ರಮಗಳು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಮತ್ತು ಇದರಿಂದ ಈ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಕಡೆಗಣಿಸಿದಂತಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಭಾರತ ಬುಧವಾರ ತಡರಾತ್ರಿ ಈ ಹೇಳಿಕೆಯನ್ನು ಅನುಮೋದಿಸಿದ್ದು, ಜಂಟಿ ಖಂಡನೆಗೆ ವಿಧಿಸಿದ್ದ ಗಡುವು ಮುಗಿಯುವ ಸ್ವಲ್ಪ ಮೊದಲು ಭಾರತ ತನ್ನ ನಿಲುವು ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಇಸ್ರೇಲ್ ಗೆ ಭೇಟಿ ನೀಡಲಿದ್ದು, ಅಲ್ಲಿನ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಹಿನ್ನೆಲೆಯಲ್ಲಿ ಭಾರತದ ಈ ನಿರ್ಧಾರ ವಿಶೇಷ ಮಹತ್ವ ಪಡೆದಿದೆ.
“ಪಶ್ಚಿಮ ದಂಡೆಯಲ್ಲಿ ಕಾನೂನುಬಾಹಿರ ಅಸ್ತಿತ್ವವನ್ನು ವಿಸ್ತರಿಸುವ ಉದ್ದೇಶದ ಇಸ್ರೇಲ್ ನ ಏಕಪಕ್ಷೀಯ ನಿರ್ಧಾರಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ಜಂಟಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇಸ್ರೇಲ್ ನ ಈ ಪ್ರಯತ್ನಗಳು ಅಂತಾರಾಷ್ಟ್ರೀಯ ಕಾನೂನುಗಳಿಗೆ ಸಂಬಂಧಿಸಿದ ಇಸ್ರೇಲ್ ನ ಬದ್ಧತೆಗೆ ವಿರುದ್ಧವಾದದ್ದುಮತ್ತು ತಕ್ಷಣ ಈ ನಡೆಯಿಂದ ಹಿಂದೆ ಸರಿಯಬೇಕು” ಎಂದು ಒತ್ತಾಯಿಸಲಾಗಿದೆ.
ಯಾವುದೇ ಬಗೆಯ ಸ್ವಾಧೀನವನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. “ಪೂರ್ವ ಜೆರುಸಲೇಂ ಸೇರಿಂದತೆ 1967ರಲ್ಲಿ ಆಕ್ರಮಿಸಿಕೊಂಡ ಬಳಿಕದ ಫೆಲಸ್ತೀನ್ ನ ಸ್ವರೂಪ, ಸ್ಥಾನಮಾನ ಭೌಗೋಳಿಕ ಸಂಯೋಜನೆಯನ್ನು ಪರಿವರ್ತಿಸುವ ಉದ್ದೇಶದ ಎಲ್ಲ ಕ್ರಮಗಳನ್ನು ನಾವು ತಿರಸ್ಕರಿಸುವುದಾಗಿ ಎಂದು ಪುನರುಚ್ಚರಿಸುತ್ತೇವೆ” ಎಂದು ವಿವರಿಸಲಾಗಿದೆ.
