ಉದಯವಾಹಿನಿ, ಗದಗ: ರಾಜ್ಯ ಸರ್ಕಾರದ ವಿರುದ್ಧ ನಿರಂತರ ಕಮಿಷನ್‌ ಆರೋಪ ಮಾಡುತ್ತಿದ್ದ ಬಿಜೆಪಿಗೆ ಈಗ ಭಾರೀ ಮುಖಭಂಗವಾಗಿದೆ. ತಮ್ಮದೇ ಪಕ್ಷದ ಶಾಸಕ ಕಮಿಷನ್‌ ಪಡೆಯುವಾಗ ಸಿಕ್ಕಿಬಿದ್ದಿದ್ದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಸಣ್ಣನೀರಾವರಿ ಇಲಾಖೆ ಕಾಮಗಾರಿ ಗುತ್ತಿಗೆ ನೀಡಲು 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಸೇರಿ ಮೂವರನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಶಾಸಕರ ಬಂಧನದ ಬೆನ್ನಲ್ಲೇ ಇನ್ನಷ್ಟು ಸ್ಫೋಟಕ ಮಾಹಿತಿಗಳು ಬಯಲಾಗಿವೆ. ಸ್ಪೀಕರ್‌ ಯು.ಟಿ ಖಾದರ್‌ ಅವರಿಗೆ ಚಂದ್ರು ಲಮಾಣಿ ಬಂಧನದ ಮಾಹಿತಿಯನ್ನ ಲೋಕಾಯುಕ್ತ ಅಧಿಕಾರಿಗಳೇ ರವಾನೆ ಮಾಡಲಾಗಿದೆ.

ರಸ್ತೆ ಬದಿ ತಡೆಗೋಡೆ ನಿರ್ಮಾಣ ಸಂಬಂಧ 1 ಕೋಟಿ ಮೊತ್ತದ ಕಾಮಗಾರಿಗೆ ಶಾಸಕ ಲಮಾಣಿ, ಕ್ಲಾಸ್‌-1 ಗುತ್ತಿಗೆದಾರ ವಿಜಯ ಪೂಜಾರ ಅವರ ಬಳಿ 11 ಲಕ್ಷ ರೂ. ಕಮಿಷನ್‌ಗೆ ಬೇಡಿಕೆಯಿಟ್ಟಿದ್ದರು. ಕಮಿಷನ್‌ ಕೊಡಲು ಇಷ್ಟವಿಲ್ಲದ ಪೂಜಾರ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಎಸ್ಪಿ ಸಿದ್ದಲಿಂಗಪ್ಪ ಅಂಡ್‌ ಟೀಂ ಶಾಸಕರ ಬಂಧನಕ್ಕೆ ಬಲೆ ಬೀಸಿತ್ತು. ಅದರಂತೆ ಇಂದು ಲಂಚ ಪಡೆಯುವಾಗ ಶಾಸಕರೂ ಹಾಗೂ ಇಬ್ಬರು ಪಿಎಗಳಾದ ಮಂಜುನಾಥ್‌ ವಾಲ್ಮೀಕಿ ಹಾಗೂ ಗುರುನಾಯ್ಕ್‌ನನ್ನ ಬಂಧಿಸಿದ್ದಾರೆ. ಬಾಲಾಜಿ ಆಸ್ಪತ್ರೆಯಲ್ಲಿ ಶಾಸಕ ಚಂದ್ರು ಲಮಾಣಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಹಿನ್ನೆಲೆ ಅವರ ಮನೆ ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!