ಉದಯವಾಹಿನಿ, ಲಕ್ನೋ: ದೇಶದ ಅತಿ ವೇಗದ ಮೆಟ್ರೋ ರೈಲು ಮಾರ್ಗವಾದ ʻನಮೋ ಭಾರತ್ʼ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದು ಮೀರತ್‌ನಲ್ಲಿ ಲೋಕಾರ್ಪಣೆಗೊಳಿಸಿದರು. 82 ಕಿ.ಮೀ. ಉದ್ದದ ನಮೋ ಭಾರತ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದರ ಭಾಗವಾದ ನಮೋ ಭಾರತ್ ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ ಅನ್ನು ಉದ್ಘಾಟಿಸಿದರು.
ಬಳಿಕ ಶತಾಬ್ದಿ ನಗರ ನಿಲ್ದಾಣದಿಂದ ಮೀರತ್ ದಕ್ಷಿಣ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದ್ರು. ಇದೇ ಸಂದರ್ಭದಲ್ಲಿ ಮೀರತ್‌ನಲ್ಲಿ ಸುಮಾರು 12,930 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಪ್ರಧಾನಿ ಮೋದಿ ಚಾಲನೆ ನೀಡಿದರು.
ಗಂಟೆಗೆ 180 ಕಿಮೀ ಸಾಮರ್ಥ್ಯದ ನಮೋ ಭಾರತ್ ಕಾರಿಡಾರ್ ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ. ಇದು ಸಾಹೀಬಾಬಾದ್, ಗಾಜಿಯಾಬಾದ್, ಮೋದಿನಗರ ಮತ್ತು ಮೀರರ್‌ನಂತಹ ಪ್ರಮುಖ ನಗರಗಳನ್ನ ದೆಹಲಿಯೊಂದಿಗೆ ವೇಗವಾಗಿ ಸಂಪರ್ಕಿಸುತ್ತದೆ.
ದೆಹಲಿಯ ಸರಾಯ್ ಕಾಲೇ ಖಾನ್ ಮತ್ತು ನ್ಯೂ ಅಶೋಕ್ ನಗರ ನಡುವಿನ 5 ಕಿಮೀ, ಮೀರತ್ ದಕ್ಷಿಣ ಮತ್ತು ಮೋದಿಪುರಂ ನಡುವಿನ 21 ಕಿಮೀ ಮತ್ತು ಶತಾಬ್ದಿ ನಗರ ನಿಲ್ದಾಣದಿಂದ ಮೀರತ್ ದಕ್ಷಿಣದಿಂದ ಮೋದಿಪುರಂವರೆಗಿನ ಮೆಟ್ರೋ ವಿಭಾಗ ಇದಾಗಿದೆ. ಇದರಿಂದ ದೆಹಲಿ ಮತ್ತು ಮೀರತ್ ನಡುವಿನ ಕೇವಲ 1 ಗಂಟೆಯಲ್ಲಿ ಕ್ರಮಿಸಬಹುದಾಗಿದೆ. ಮೀರತ್ ಮೆಟ್ರೋ ರೈಲು ಮಾರ್ಗವು ದೇಶದ ಅತ್ಯಂತ ವೇಗದ ಮೆಟ್ರೋ ವ್ಯವಸ್ಥೆಯಾಗಿದೆ. ಇದರ ಕಾರ್ಯಾಚರಣೆಯ ಗರಿಷ್ಠ ವೇಗ ಗಂಟೆಗೆ 120 ಕಿಮೀ ಆಗಿದೆ. ಕೇವಲ 30 ನಿಮಿಷಗಳಲ್ಲಿ ಗಮ್ಯಸ್ಥಾನ ತಲುಪಲಿದೆ. ನಗರಗಳಿಂದ ನಗರಗಳಿಗೆ ಅಥವಾ ನಗರದ ಸುತ್ತುಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಜಾಲ ಖಚಿತಪಡಿಸುತ್ತದೆ. ಅಲ್ಲದೇ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನ ಕಡಿಮೆ ಮಾಡಲಿದೆ.
