ಉದಯವಾಹಿನಿ, ಚಾಮರಾಜನಗರ: ಪರ ವಿರೋಧ ಹೋರಾಟಗಳ ನಡುವೆ ಬಂಡೀಪುರದಲ್ಲಿ ಸಫಾರಿ ಪುನಾರಂಭಗೊಂಡಿದೆ. ಸಫಾರಿಗೆ ರೈತ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪೊಲೀಸ್ ಸರ್ಪಗಾವಲಿನಲ್ಲಿ ಸಫಾರಿ ಪುನಾರಂಭ ಮಾಡಲಾಗಿದ್ದು, ಪ್ರವಾಸಿಗರು ಸಂತಸಗೊಂಡಿದ್ದಾರೆ.
ಬಂಡೀಪುರ ಹಾಗೂ ನಾಗರಹೊಳೆ ವ್ಯಾಪ್ತಿಯಲ್ಲಿ ಹುಲಿಗಳ ದಾಳಿಗೆ ಮೂವರು ರೈತರು ಬಲಿಯಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಮತ್ತೆ ಆರಂಭಿಸಲಾಗಿದೆ. ಸಫಾರಿ ಪುನಾರಂಭಕ್ಕೆ ರೈತ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಬಂಡೀಪುರ ಸಫಾರಿ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸ್ ಸರ್ಪಗಾವಲಿನಲ್ಲಿ ಸಫಾರಿ ಆರಂಭಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದಿಂದ ಬಂಡೀಪುರ ಅರಣ್ಯ ಪ್ರವೇಶ ದ್ವಾರದವರೆಗೂ ಸಫಾರಿ ವಾಹನಗಳಿಗೆ ಪೊಲೀಸ್ ಎಸ್ಕಾರ್ಟ್ ನೀಡಲಾಗುತ್ತಿದೆ. ಕೆಲವು ಮಾರ್ಪಾಡುಗಳೊಂದಿಗೆ ಸಫಾರಿ ಆರಂಭಿಸಲಾಗಿದ್ದು, 50%ರಷ್ಟು ವಾಹನಗಳನ್ನು ಮಾತ್ರ ಬಳಸಲಾಗುತ್ತಿದೆ. ಹಿಂದೆ ಎಂಟು ಗಂಟೆ ಇದ್ದ ಸಫಾರಿ ಅವಧಿಯನ್ನು 5 ಗಂಟೆಗೆ ಇಳಿಸಲಾಗಿದೆ. ಬೆಳಿಗ್ಗೆ 6:30ರಿಂದ 9 ಹಾಗೂ ಸಂಜೆ 3:30ರಿಂದ 6 ಗಂಟೆಯವರೆಗೆ ಸಮಯ ನಿಗದಿಗೊಳಿಸಲಾಗಿದೆ. ಇನ್ನೂ ಮೂರು ತಿಂಗಳ ಬಳಿಕ ಪುನಾರಂಭಗೊಂಡ ಸಫಾರಿಗೆ ಮೊದಲ ದಿನವೇ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಪ್ರವಾಸಿಗರ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಸಫಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಾಕೃತಿಕವಾಗಿ ವನ್ಯಪ್ರಾಣಿಗಳನ್ನು ವೀಕ್ಷಿಸಲು ಪ್ರವಾಸಿಗರು ತುಂಬಾ ಕಾತುರರಾಗಿದ್ದು ಕಂಡುಬಂತು.
