ಉದಯವಾಹಿನಿ ತಾಳಿಕೋಟಿ: ಪ್ರಕೃತಿಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರದ ನಾಶದಿಂದಾಗಿ ಹಲವಾರು ಗಂಭೀರ ಸಮಸ್ಯೆಗಳು ಉದ್ಭವಿಸಿವೆ. ಇದು ದೂರವಾಗಬೇಕಾದರೆ ಹಸಿರು ನಮ್ಮೆಲ್ಲರ ಉಸಿರಾಗಬೇಕು ಎಂದು ಖ್ಯಾತ ಸಾಹಿತಿ ಅಶೋಕ ಹಂಚಲಿ ಹೇಳಿದರು.
ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಅಂಗವಾಗಿ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮೈಲೇಶ್ವರದಲ್ಲಿ ಹಮ್ಮಿಕೊಂಡ ಸಸಿನೆಡುವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.
ಬ್ರಿಲಿಯಂಟ್ ಶಾಲೆಯ ಆಡಳಿತಾಧಿಕಾರಿ ಎಸ್.ಡಿ. ಕರ್ಜಗಿ, ಅವರು ಮಾತನಾಡಿ ಮನುಷ್ಯನ ಆರೋಗ್ಯದ ಮೇಲೆ ಪರಿಸರದ ಪ್ರಭಾವ ಗಾಢವಾಗಿದೆ. ಪ್ರಕೃತಿ ಪರಿಶುದ್ಧವಾಗಿದ್ದರೆ ಮಾತ್ರ ಒಂದು ಆರೋಗ್ಯ ಪೂರ್ಣ ಸಮಾಜದ ನಿರ್ಮಾಣ ಸಾಧ್ಯ. ನಾವೆಲ್ಲರೂ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಮಾಡಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ವಿವಿಧ ತಳಿಯ ಗಿಡಗಳು ಹಾಗೂ ಹೂವಿನ ಗಿಡಗಳನ್ನು ಸಾಮೂಹಿಕವಾಗಿ ನೆಡಲಾಯಿತು.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ. ಮಡಿವಾಳರ, ಶಿಕ್ಷಕ ಗುಂಡುರಾವ್ ಧನಪಾಲ, ಎರಡು ವಿಭಾಗದ ಮುಖ್ಯೋಪಾಧ್ಯಾಯರಾದ ವಿನಾಯಕ ಪಟಗಾರ, ಎಸ್.ಸಿ. ಕರಡಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
