ಉದಯವಾಹಿನಿ ದೇವದುರ್ಗ: ಮೂಷ್ಠರು ಗ್ರಾಪಂ ವ್ಯಾಪ್ತಿಯ ಶಿವಂಗಿ ಗ್ರಾಮದಲ್ಲಿ ನರೇಗಾ ಕಾರ್ಮಿಕರು ಏಳು ದಿನಗಳ ಕೆಲಸ ನಿರ್ವಹಿಸಿಲಾಗಿದ್ದು, ಆನ್‍ಲೈನ್‍ನಲ್ಲಿ ಎಂಟ್ರಿ ಮಾಡುತ್ತಿಲ್ಲ. ಗ್ರಾಪಂ ಅಧಿಕಾರಿ, ಸಹಾಯಕ ಅಭಿಯಂತರ ವಿರುದ್ಧ ಕ್ರಮಕೈಗೊಳ್ಳುವಂತೆ ಕೂಲಿ ಕಾರರು ಶುಕ್ರವಾರ ತಾಪಂ ಮುಂದೆ ಪ್ರತಿಭಟಿಸಿ ಇಒ ರಾಮರೆಡ್ಡಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮೀಣ ಜನರಿಗೆ ಉದ್ಯೋಗ ನೀಡಲೆಂದು ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗಿದೆ. ಆದರೆ ಅಧಿಕಾರಿಗಳು ಕೂಲಿ ಕಾರರಿಗೆ ಕೆಲಸ ನೀಡದೇ ಸತಾಯಿಸುತ್ತಿದ್ದಾರೆ ಎಂದು ದೂರಿದರು. ಮಳೆ ನೆಪದಲ್ಲಿ ಕೆಲಸ ನೀಡುತ್ತಿಲ್ಲ. ಇದರಿಂದಾಗಿ ದುಡಿಯುವ ಕೈಯಿಗಳಿಗೆ ಕೆಲಸವಿಲ್ಲದಂತಾಗಿದೆ. ಗ್ರಾಪಂ ಅಧಿಕಾರಿ ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ಪ್ರಶ್ನೆ ಮಾಡಿದರೇ ನೀವು ಯಾರು? ಎಂಬ ಉಢಾಪೆ ಉತ್ತರ ನೀಡುತ್ತಿದ್ದರಿಂದ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ದೂರಿದರು. ಪಿಡಿಒ ಮತ್ತು ಜೆಇ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಕೂಲಿ ಕಾರರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಬೇಡಿಕೆಗಳು ಈಡೇರದೇ ಇದ್ದಲ್ಲಿ, ನಿರಂತರ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ವೆಂಕಟೇಶ, ಹನುಮಂತ, ಶಿವಮ್ಮ, ರೇಣುಕಮ್ಮ, ನಾಗಪ್ಪ, ಚಾದೀಬಿ ಬೇಗಂ, ಮಾರೆಮ್ಮ, ಶಾಂತಮ್ಮ, ರಂಗಮ್ಮ, ಈರಮ್ಮ ಸೇರಿ ಇತರರು ಇದ್ದರು.
