ಉದಯವಾಹಿನಿ, ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಾನೆಗಳು ಚಿಕ್ಕಮಗಳೂರು ನಗರದಿಂದ ಕೇವಲ 5 ಕಿಮೀ ದೂರದ ಮತ್ತಾವರ ಗ್ರಾಮದ ಹಾಸುಪಾಸಿನಲ್ಲಿ ಬೀಡು ಬಿಟ್ಟಿರುವುದು ಚಿಕ್ಕಮಗಳೂರು ನಗರ ನಿವಾಸಿಗಳ ನಿದ್ದೆಗೆಡಿಸಿದೆ. ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಕ್ಷರಶಃ ಮಲೆನಾಡಿಗರ ನೆಮ್ಮದಿ ಕೆಡಿಸಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗಜಪಡೆಗಳ ಸಂಚಾರ ಮಿತಿಮೀರಿದ್ದು, ಕಾಫಿ ತೋಟದ ಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಗಳು ಪ್ರತಿ ಕ್ಷಣವೂ ಆತಂಕದಲ್ಲೇ ಬದುಕುವಂತಾಗಿದೆ. ಇನ್ನೂ ​ಚಿಕ್ಕಮಗಳೂರು ನಗರಕ್ಕೆ ತೀರಾ ಸಮೀಪದಲ್ಲಿರುವ ಮತ್ತವರ ಮತ್ತು ನಲ್ಲೂರು ಗ್ರಾಮಗಳ ಸುತ್ತಮುತ್ತ 2 ಪುಂಡಾನೆಗಳು ಬೀಡುಬಿಟ್ಟಿವೆ. ಈ ಆನೆಗಳು ಎಸ್ಟೇಟ್‌ಗಳ ನಡುವೆ ಓಡಾಟ ನಡೆಸುತ್ತಿರುವುದರಿಂದ ತೋಟದ ಕೆಲಸಕ್ಕೆ ಹೋಗಲು ಕಾರ್ಮಿಕರು ಭಯಪಡುತ್ತಿದ್ದಾರೆ.

ಜೊತೆಗೆ ಭತ್ತದ ಪೈರನ್ನು ನಾಶ ಮಾಡಿವೆ. ಅತ್ತ ಚಿಕ್ಕಮಗಳೂರು ಮತ್ತು ಬೇಲೂರು ಗಡಿ ಭಾಗದ ಗ್ರಾಮವಾದ ಚೀಕನಹಳ್ಳಿಯ ಸುತ್ತಮುತ್ತ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ.​ ಇನ್ನೂ ನರಸಿಂಹರಾಜಪುರ ತಾಲೂಕಿನ ಮಡಬೂರು ಗ್ರಾಮದ ಯಕ್ಕಡಬೈಲಿನ ಅರಣ್ಯ ಪ್ರದೇಶದಲ್ಲಿ ಆನೆಗಳ ಹಿಂಡೇ ಬೀಡುಬಿಟ್ಟಿದೆ. ಒಂಟಿ ಆನೆಗಳಷ್ಟೇ ಅಲ್ಲದೇ ಹಿಂಡು ಹಿಂಡಾಗಿ ಆನೆಗಳು ಕಾಣಿಸಿಕೊಳ್ಳುತ್ತಿರುವುದು ಕೃಷಿಕರ ನಿದ್ದೆಗೆಡಿಸಿದೆ. ಬೆಳೆ ಹಾನಿ ಭೀತಿಯ ಜೊತೆ ಜೀ ಭಯವೂ ಕಾಡುತ್ತಿದೆ. ​ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಜಾಗರೂಕತೆಯಿಂದ ಇರಲು ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!