ಉದಯವಾಹಿನಿ, ತಿರುವನಂತಪುರಂ(ಕೇರಳ): ಇನ್ನು ಮುಂದೆ ಕೇರಳದಲ್ಲಿ ಸರ್ಕಾರದಿಂದ ನಡೆಸಲ್ಪಡುವ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಮತ್ತು ಇತರೆ ಶಿಕ್ಷಣ ಸಂಸ್ಥೆಗಳಿಗೆ ಧರ್ಮವನ್ನು ಸೂಚಿಸುವ ಹೆಸರಿಡುವ ಹಾಗಿಲ್ಲ. ಸಿಎಂ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಉದ್ದೇಶವೇನು?: ಸರ್ಕಾರ ನಡೆಸುವ ಶಿಕ್ಷಣ ಸಂಸ್ಥೆಗಳು ಜಾತ್ಯತೀತವಾಗಿ ಉಳಿಯಬೇಕು. ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿಬಿಂಬಿಸಬೇಕು. ಇವುಗಳನ್ನು ನೋಡಿಕೊಳ್ಳುವ ಗುರಿಯನ್ನು ಈ ನಿರ್ಧಾರ ಹೊಂದಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ನಿರ್ಧಾರ ಭವಿಷ್ಯದಲ್ಲಿ ಸ್ಥಾಪಿಸುವ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯ. ಈಗ ಇರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಹೆಸರುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.
ಈ ಕುರಿತು ನ್ಯಾ.ಜೆ.ಬಿ.ಕೋಶಿ ಆಯೋಗ ಸಲ್ಲಿಸಿದ ವರದಿಯನ್ನು ಸಚಿವ ಸಂಪುಟ ತಾತ್ವಿಕವಾಗಿ ಒಪ್ಪಿದೆ. ಕೇರಳದಲ್ಲಿ ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಧ್ಯಯನಕ್ಕೆ ಕೋಶಿ ನೇತೃತ್ವದ ಆಯೋಗವನ್ನುಸರ್ಕಾರ ರಚಿಸಿತ್ತು.
‘ಕೇರಳಂ’ ಎಂದು ಮರುನಾಮಕರಣ: ಕೇರಳಕ್ಕೆ ಸಂಬಂಧಿಸಿದಂತೆ ನಿನ್ನೆ ಮಹತ್ವದ ಮತ್ತೊಂದು ಬೆಳವಣಿಗೆ ನಡೆದಿತ್ತು. ಕೇರಳ ಇನ್ನು ಮುಂದೆ ‘ಕೇರಳಂ’ ಎಂದಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ರಾಜ್ಯದ ಹೆಸರು ಅಧಿಕೃತವಾಗಿ ‘ಕೇರಳಂ’ ಎಂದಾಗುತ್ತದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕೆ: ಕೇರಳವನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡಿದ್ದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಕೇಂದ್ರ ಸರ್ಕಾರವು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಅಭಿವೃದ್ಧಿ ಯೋಜನೆಗಳು ಅಥವಾ ಯಾವುದೇ ಹೊಸ ಸಂಸ್ಥೆಗಳನ್ನು ಕೇರಳಕ್ಕೆ ನೀಡಿಲ್ಲ. ಇದರ ಬದಲು ರಾಜ್ಯದ ಮರುನಾಮಕರಣದತ್ತ ವಿಶೇಷ ಗಮನಹರಿಸಿದೆ ಎಂದು ಟೀಕಿಸಿದರು. ಕೇರಳ ಮಲಯಾಳಂನಲ್ಲಿ ‘ಕೇರಳಂ’ ಎಂದೇ ಆಗುತ್ತದೆ. ಈಗ ಮಲಯಾಳಂ ಪದ ಇಂಗ್ಲಿಷ್‌ಗೆ ಬರುತ್ತಿದೆ ಅಷ್ಟೇ. ಇದರಿಂದ ಯಾವ ರೀತಿಯ ವ್ಯತ್ಯಾಸ ಆಗುತ್ತದೆ ಎಂದು ನನಗಂತೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
