ಉದಯವಾಹಿನಿ,: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ. ಅಮೆರಿಕ ತನ್ನ ಯುದ್ಧನೌಕೆಗಳು ಹಾಗೂ ಯುದ್ಧ ವಿಮಾನಗಳನ್ನು ಮಧ್ಯಪ್ರಾಚ್ಯದಲ್ಲಿ ನಿಯೋಜಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಒತ್ತಡ ಪದೇ ಪದೇ ಒತ್ತಡ ಹೆಚ್ಚಿಸುತ್ತಿರುವುದು ಇರಾನ್‌ಗೆ ದೊಡ್ಡ ತಲೆನೋವಾಗಿದೆ.
ಇರಾನ್‌ನ ಉನ್ನತ ಅಧಿಕಾರಿಗಳ ಹೇಳಿಕೆಯ ಪ್ರಕಾರ, ಅಮೆರಿಕ ದಾಳಿ ನಡೆಸಿದರೆ ಎರಡು ದೇಶಗಳ ನಡುವಿನ ಮಾತುಕತೆ ಸಂಪೂರ್ಣವಾಗಿ ಸ್ಥಗಿತವಾಗಬಹುದು. ಅದಕ್ಕೆ ಪ್ರತಿಯಾಗಿ ಇರಾನ್ ಕೂಡ ತೀವ್ರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ದೊಡ್ಡ ಯುದ್ಧದ ಭೀತಿಯನ್ನು ಹುಟ್ಟಿಸಿವೆ.
ಇದೇ ವೇಳೆ, ಇರಾನ್ ರಷ್ಯಾದೊಂದಿಗೆ ಒಮಾನ್ ಕೊಲ್ಲಿ ಪ್ರದೇಶದಲ್ಲಿ ಸಂಯುಕ್ತ ಯುದ್ಧಾಭ್ಯಾಸ ನಡೆಸುತ್ತಿರುವುದು ಕೂಡ ಗಮನಾರ್ಹವಾಗಿದೆ. ಅಮೆರಿಕ–ಇರಾನ್ ಯುದ್ಧ ಭುಗಿಲೆದ್ದರೆ ಅದರ ನೇರ ಪರಿಣಾಮ ಭಾರತಕ್ಕೂ ತಟ್ಟಬಹುದು. ಮೊದಲನೇಯದಾಗಿ ಭಾರತ ತನ್ನ ಕಚ್ಚಾ ತೈಲದ ಬಹುಪಾಲನ್ನು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಯುದ್ಧ ಉಂಟಾದರೆ, ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಮುಚ್ಚುವ ಸಾಧ್ಯತೆಯಿದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಹೀಗಾದರೆ ಭಾರತದಲ್ಲಿ ಇಂಧನದ ಬೆಲೆಗಳು ಗಗನಕ್ಕೇರಬಹುದು.
ಇಂಧನ ಬೆಲೆ ಏರಿಕೆಯಿಂದ ದರ ಏರಿಕೆ ಹೆಚ್ಚಾಗಿ, ಭಾರತೀಯ ಆರ್ಥಿಕತೆಗೆ ಹೊಡೆತ ಬೀಳಬಹುದು. ಷೇರು ಮಾರುಕಟ್ಟೆ ಹಾಗೂ ರೂಪಾಯಿ ಮೌಲ್ಯದಲ್ಲೂ ಅಸ್ಥಿರತೆ ಕಾಣಿಸಬಹುದು. ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಉದ್ಯೋಗದಲ್ಲಿದ್ದಾರೆ. ಯುದ್ಧ ಪರಿಸ್ಥಿತಿ ಉಂಟಾದರೆ ಅವರ ಸುರಕ್ಷತೆ ಪ್ರಶ್ನಾರ್ಹವಾಗಬಹುದು.
ತಜ್ಞರ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವಿನ ಪರಿಸ್ಥಿತಿ ನಿಯಂತ್ರಣ ತಪ್ಪಿದರೆ ಮಧ್ಯಪ್ರಾಚ್ಯ ಸಂಪೂರ್ಣವಾಗಿ ಉದ್ವಿಗ್ನ ವಲಯವಾಗಬಹುದು. ಇದೇ ರೀತಿ ಮಾತುಕತೆ ಮುಂದುವರಿದರೆ ಯುದ್ಧ ತಪ್ಪುವ ಸಾಧ್ಯತೆ ಇದ್ದರೂ, ಪರಿಸ್ಥಿತಿ ತೀವ್ರವಾಗಿರುವುದರಿಂದ ಜಾಗತಿಕ ಮಾರುಕಟ್ಟೆಗಳು ಕಾದು ನೋಡುವ ಸ್ಥಿತಿಯಲ್ಲಿ ಇವೆ. ಭಾರತ ಸರ್ಕಾರವೂ ಕೂಡ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಇಂಧನ ಪೂರೈಕೆ ಮತ್ತು ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
