ಉದಯವಾಹಿನಿ, ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ , ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಹಾಗೂ ತೆಲಂಗಾಣದ ಎಂಎಲ್‌ಸಿ ಕೆ. ಕವಿತಾ ಕಳಂಕಮುಕ್ತರಾಗಿದ್ದಾರೆ.ಪ್ರಮುಖ ತೀರ್ಪಿನಲ್ಲಿ ರೌಸ್ ಅವೆನ್ಯೂ ಕೋರ್ಟ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ , ಕೆ. ಕವಿತಾ ಸೇರಿ ಎಲ್ಲಾ 23 ಆರೋಪಿಗಳನ್ನ ದೆಹಲಿ ಅಬಕಾರಿ ನೀತಿ ಪ್ರಕರಣದಿಂದ ಖುಲಾಸೆಗೊಳಿಸಿದೆ. ಅಬಕಾರಿ ನೀತಿ ರಚನೆಯಲ್ಲಿ ಕ್ರಿಮಿನಲ್ ಪಿತೂರಿಯಾಗಲಿ ಅಥವಾ ತಪ್ಪು ಮಾಡಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ವಿಶೇಷ ನ್ಯಾಯಾಧೀಶರ ಪೀಠ ಹೇಳಿದೆ.
ಕೋರ್ಟ್ ಹೇಳಿದ್ದೇನು?
ಜಿತೇಂದ್ರ ಸಿಂಗ್ ಸಿಸೋಡಿಯಾ ಮತ್ತು ಇತರರೊಂದಿಗೆ 18ನೇ ಆರೋಪಿ ಎಂದು ಹೆಸರಿಸಲಾದ ಕೇಜ್ರಿವಾಲ್ ಅವರನ್ನ ಖುಲಾಸೆಗೊಳಿಸಲಾಗಿದೆ. ಆರೋಪಗಳಿಗೆ ಯಾವುದೇ ಅರ್ಹತೆ ಇಲ್ಲ ಎಂದಿದೆ. ಅಬಕಾರಿ ನೀತಿಯಲ್ಲಿ ಯಾವುದೇ ಪಿತೂರಿಯಾಗಲಿ ಅಥವಾ ಕ್ರಿಮಿನಲ್ ಉದ್ದೇಶಗಳಾಗಲಿ ಇರಲಿಲ್ಲ ಎಂದು ವಿಶೇಷ ನ್ಯಾಯಾಧೀಶರ ಪೀಠ ಹೇಳಿದೆ.
ಯಾವುದೇ ಸಾಕ್ಷ್ಯಗಳಿಲ್ಲದಿದ್ದರೂ ನಾಯಕರ ವಿರುದ್ಧ ದೋಷಾರೋಪ ಹೊರಿಸಿದ್ದಕ್ಕಾಗಿ ಸಿಬಿಐ ಅನ್ನು ಕೋರ್ಟ್ ತೀವ್ರವಾಗಿ ಖಂಡಿಸಿದೆ. ಸಿಬಿಐ ಚಾರ್ಜ್‌ಶೀಟ್ ಅನೇಕ ದೋಷಗಳಿಂದ ಕೂಡಿದೆ. ಸಾಕ್ಷಿಗಳ ಹೇಳಿಕೆಗಳಿಂದ ಬೆಂಬಲಿತವಾಗಿಲ್ಲ. ಸಿಸೋಡಿಯಾ ಅವರ ವಿರುದ್ಧ ನಾಮಕಾವಸ್ಥೆಗೆ ಪ್ರಕರಣ ದಾಖಲಿಸಲಾಗಿದೆ. ಕೇಜ್ರಿವಾಲ್ ವಿರುದ್ಧ ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಹೊರಿಸಲಾಗಿದೆ ಎಂದು ಕೋರ್ಟ್ ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡಿದೆ. ಬಳಿಕ 23 ಆರೋಪಿಳ ವಿರುದ್ಧದ ಆರೋಪಗಳನ್ನು ಖುಲಾಸೆಗೊಳಿಸಿದೆ.
