ಉದಯವಾಹಿನಿ, ಬಹ್ರೈಚ್(ಉತ್ತರ ಪ್ರದೇಶ): ಮಾರ್ಚ್ 5ರಂದು ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಮಾರ್ಚ್2ರ ಮಧ್ಯರಾತ್ರಿಯಿಂದಲೇ ಭಾರತ ಮತ್ತು ನೇಪಾಳ ಗಡಿಯಲ್ಲಿ ಸಂಚಾರ ಬಂದ್ ಮಾಡಿ, ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮುಖ್ಯಸ್ಥ ಸುಧೀರ್ ಶರ್ಮಾ, ನೇಪಾಳ ಗೃಹ ಸಚಿವಾಲಯ ಗಡಿ ಬಂದ್ ಕುರಿತಂತೆ ಫೆ.26ರಂದು ಅಧಿಕೃತವಾಗಿ ಮಾತುಕತೆ ನಡೆಸಿದೆ. ಪತ್ರದಲ್ಲಿ ರಾಜ್ಯದ ಬಂಕೆ ಜಿಲ್ಲೆಯ ಸಂಪೂರ್ಣ ಗಡಿ ಭಾಗಗಳನ್ನು ಮಾರ್ಚ್ 2ರ ಮಧ್ಯರಾತ್ರಿ 12ರಿಂದ ಬಂದ್ ಮಾಡಲಾಗುವುದು. ಈ ಮೂಲಕ ನೇಪಾಳದಲ್ಲಿ ಮುಕ್ತ, ಸುರಕ್ಷಿತ, ನಿರ್ಭಯ ಮತ್ತು ವಿಶ್ವಾಸಾರ್ಹ ಪರಿಸ್ಥಿತಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದಿದ್ದಾರೆ.
ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ ಈ ಅವಧಿಯವರೆಗೆ ನಡೆಯುವ ಎಲ್ಲಾ ಆಮದು ಮತ್ತು ರಫ್ತು ಕಾರ್ಯಾಚರಣೆಗಳನ್ನು ರದ್ದು ಮಾಡಲಾಗುವುದು. ಆದರೆ, ಅಗತ್ಯ ವೈದ್ಯಕೀಯ ಮತ್ತು ನೀರು, ಹಾಲಿನ ಟ್ಯಾಂಕರ್, ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ನಿರ್ಣಾಯಕ ಸರಕುಗಳ ಸಂಚಾರಕ್ಕೆ ಅಡ್ಡಿ ಇಲ್ಲ ಎಂದಿದ್ದಾರೆ.
42ನೇ ಸಶಸ್ತ್ರ ಸೀಮಾ ಬಲದ ಕಮಾಂಡೆಂಟ್ ಗಂಗಾ ಸಿಂಗ್ ಉದ್ವಾತ್ ಮಾತನಾಡಿ, ಮಾರ್ಚ್ 2ರ ಮಧ್ಯರಾತ್ರಿಯಿಂದ ಚುನಾವಣೆ ನಡೆಯುವವರೆಗೆ ಎಲ್ಲಾ ಗಡಿಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಇದರ ಜೊತೆಗೆ ಗಡಿಗಳಲ್ಲಿ ಹೆಚ್ಚಿನ ಕಣ್ಗಾವಲುಗಳ ನಿರ್ವಹಣೆ ನಡೆಸಲಾಗುವುದು. ಅಧಿಕೃತ ದಾಖಲೆಗಳ ಪರಿಶೀಲನೆ ಬಳಿಕವೇ ಜನರಿಗೆ ಗಡಿ ದಾಟಲು ಅವಕಾಶ ನೀಡಲಾಗುವುದು. ಎರಡೂ ದೇಶಗಳ ನಾಗರಿಕರು ನಿರ್ಬಂಧಿತ ಅವಧಿಯಲ್ಲಿ ತೀರಾ ಅಗತ್ಯವಿಲ್ಲದಿದ್ದರೆ ಗಡಿ ದಾಟದಿರುವಂತೆ ಸೂಚಿಸಲಾಗಿದೆ.
ಹೆಚ್ಚಿನ ಸಂಖ್ಯೆಯ ನೇಪಾಳಿ ಮತದಾರರು ಉದ್ಯೋಗ ಮತ್ತು ವ್ಯಾಪಾರ ಉದ್ದೇಶಗಳಿಗಾಗಿ ಭಾರತದಲ್ಲಿ ವಾಸಿಸುತ್ತಿದ್ದಾರೆ. ಅಂತಹ ಮತದಾರರು, ಹಾಗೆಯೇ ತೀವ್ರ ಅಸ್ವಸ್ಥ ರೋಗಿಗಳು ಮತ್ತು ಅಗತ್ಯ ವಸ್ತುಗಳನ್ನು ಭದ್ರತಾ ಪಡೆಗಳ ಮೇಲ್ವಿಚಾರಣೆಯಲ್ಲಿ ಗಡಿಯುದ್ದಕ್ಕೂ ಅನುಮತಿಸಬಹುದು.
ಚುನಾವಣೆಯ ವೇಳೆ ಗಡಿ ಭಾಗದಿಂದ ಅಕ್ರಮ ಶಸ್ತ್ರಾಸ್ತ್ರಗಳು ಸರಬರಾಜಾಗುವ ಹಿನ್ನೆಲೆಯಲ್ಲಿ ಗಸ್ತು ಹೆಚ್ಚಿಸಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಎರಡೂ ದೇಶಗಳ ಭದ್ರತಾ ಪಡೆಗಳ ನಡುವೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
