ಉದಯವಾಹಿನಿ, ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ವಿದ್ಯಾರ್ಥಿ ಸಂಘಟನೆಗಳು ಮತ್ತು ಪೊಲೀಸರ ನಡುವಿನ ಘರ್ಷಣೆ ಭುಗಿಲೆದ್ದಿದೆ. ಶಿಕ್ಷಣ ಸಚಿವಾಲಯದ ಬಳಿ ನಡೆದ ಪ್ರತಿಭಟನಾ ಮೆರವಣಿಗೆ ದೆಹಲಿ ಪೊಲೀಸರೊಂದಿಗಿನ ಘರ್ಷಣೆಗೆ ಕಾರಣವಾಯಿತು. ಇದು ಕ್ಯಾಂಪಸ್ ಒಳಗೆ ಮತ್ತು ಹೊರಗೆ ಉದ್ವಿಗ್ನತೆಯನ್ನುಂಟು ಮಾಡಿತ್ತು. ನಂತರ ಹದಿನಾಲ್ಕು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ) ಮತ್ತು ಜೆಎನ್ಯುಎಸ್ಯು ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ನಡೆಸುವಾಗ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೆಎನ್ಯುಎಸ್ಯು ಅಧ್ಯಕ್ಷೆ ಅದಿತಿ ಮಿಶ್ರಾ, ಉಪಾಧ್ಯಕ್ಷೆ ಗೋಪಿಕಾ, ಜಂಟಿ ಕಾರ್ಯದರ್ಶಿ ಡ್ಯಾನಿಶ್ ಅಲಿ, ಮಾಜಿ ಅಧ್ಯಕ್ಷ ನಿತೀಶ್ ಕುಮಾರ್ ಮತ್ತು ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಬಂಧನದ ಬೆನ್ನಲ್ಲೆ ವಿದ್ಯಾರ್ಥಿಗಳು ವಸಂತ್ ಕುಂಜ್ ಪೊಲೀಸ್ ಠಾಣೆವರೆಗೆ ಮೆರವಣಿಗೆ ನಡೆಸಿದ್ದು, ಬಿಡುಗಡೆಗೆ ಆಗ್ರಹಿಸಿದ್ದಾರೆ.
ಪ್ರತಿಭಟನೆಗೆ ಕಾರಣ: ವಿದ್ಯಾರ್ಥಿ ಸಂಘಟನೆಗಳು ಹೇಳುವಂತೆ, ಫೆಬ್ರವರಿ 26ರಂದು ಉನ್ನತ ಶಿಕ್ಷಣದಲ್ಲಿ ಸಮಾನತೆಗೆ ಸಂಬಂಧಿಸಿದ ಬಹು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೀರ್ಘ ಪ್ರತಿಭಟನೆಗೆ ಕರೆ ನೀಡಲಾಗಿತ್ತು.
ರೋಹಿತ್ ವೇಮುಲ ಕಾಯ್ದೆಯ ಮಾದರಿಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸಮಾನತೆಯ ಮಾರ್ಗಸೂಚಿಗಳನ್ನು ಜಾರಿಗೆ ತರುವುದು, ವಿಶ್ವವಿದ್ಯಾಲಯಗಳಿಗೆ ಸಾರ್ವಜನಿಕ ನಿಧಿಯನ್ನು ಬಲಪಡಿಸುವುದು, ಎನ್‌ಇಪಿ ಸಂಬಂಧಿತ ಕೋರ್ಸ್‌ಗಳನ್ನು ಹಿಂತೆಗೆದುಕೊಳ್ಳುವುದು. ಹೊಸದಾಗಿ ಪರಿಚಯಿಸಲಾದ ಸಿದ್ಧಾಂತ ಫೌಂಡೇಶನ್ ಕಾರ್ಯಕ್ರಮಗಳನ್ನು ಪರಿಶೀಲಿಸಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿತ್ತು.
ಇದರ ಜೊತೆಗೆ ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ ಜಾತಿ ಸಂಬಂಧಿತ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಉಪಕುಲಪತಿ ಪ್ರೊಫೆಸರ್ ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರು ಕ್ಷಮೆಯಾಚಿಸಿ, ರಾಜೀನಾಮೆ ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದರು.
