ಉದಯವಾಹಿನಿ, ಅಹಮದಾಬಾದ್: ದಕ್ಷಿಣ ಮತ್ತು ಮಧ್ಯ ಗುಜರಾತ್‌ನ ಹಲವಾರು ಭಾಗಗಳಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಹಲವು ಕಡೆ ಭಾಗಗಳು ಜಲಾವೃತವಾಗಿದೆ. ೧೯ ತಾಲೂಕುಗಳಲ್ಲಿ ೧೦೦ ಮಿಲಿಮೀಟರ್‌ಗಿಂತ ಹೆಚ್ಚು ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ಮಳೆ ಅನಾಹುತ ಮತ್ತು ಪ್ರವಾಹದ ಪರಿಸ್ಥಿತಿ ಹಿನ್ನೆಲೆಯಲ್ಲಿ ನವಸಾರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಸತತ ಮಳೆಯಿಂದಾಗಿ ಗುಜರಾತ್ ನ ನವಸಾರಿ ಜಿಲ್ಲೆಯಲ್ಲಿ ತೀವ್ರ ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾಧಿಕಾರಿ ಅಮಿತ್ ಪ್ರಕಾಶ್ ಯಾದವ್ ಹೇಳಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಿದ್ದಾರೆ. ಈ ನಡುವೆ ಗುಜರಾತ್‌ನ ವಿವಿಧ ಜಿಲ್ಲೆಗಳಲ್ಲಿ ಕೆಂಪು, ಕಿತ್ತಳೆ ಮತ್ತು ಹಳದಿ ಎಚ್ಚರಿಕೆಗಳನ್ನು ನೀಡಲಾಗಿದೆ.
ದಾಖಲೆ ಮಳೆ: ಗುಜರಾತ್‌ನ ವಿವಿಧ ಭಾಗಗಳಲ್ಲಿ ಅದರಲ್ಲಿಯೂ ಸೂರತ್ ಜಿಲ್ಲೆಯ ಮಹುವ ತಾಲೂಕಿನಲ್ಲಿ ೩೦೨ ಮಿಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛೋಟೌಡೆಪುರ್, ಪಂಚಮಹಲ್, ದಹೋಡ್, ವಡೋದರಾ, ಭರೂಚ್ ಮತ್ತು ವಲ್ಸಾದ್ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ “ಭಾರಿಯಿಂದ ಅತಿ ಭಾರೀ ಮಳೆ”ಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸತತ ಸುರಿದ ಮಳೆಯಿಂದಾಗಿ ಮಧ್ಯ ಗುಜರಾತ್‌ನ ಛೋಟೌಡೆಪುರ ಜಿಲ್ಲೆಯ ಬೋಡೆಲಿ ತಾಲೂಕಿನ ಹಲವು ಪ್ರದೇಶಗಳು, ದಕ್ಷಿಣ ಗುಜರಾತ್‌ನ ಸೂರತ್ ಜಿಲ್ಲೆಯ ಬಾರ್ಡೋಲಿ ತಾಲೂಕು ಮತ್ತು ವಡೋದರದ ಕರ್ಜನ್ ತಾಲೂಕಿನ ತಗ್ಗು ಪ್ರದೇಶಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!