ಉದಯವಾಹಿನಿ, ವಿಶ್ವಸಂಸ್ಥೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ಈ ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.ಈ ಮೂಲಕ ಇದೇ ಮೊದಲ ಬಾರಿಗೆ ಪ್ರಥಮ ಮಹಿಳೆಯೊಬ್ಬರು ಅಥವಾ ದೇಶದ ಪ್ರಥಮ ಪ್ರಜೆಯೊಬ್ಬರು ಭದ್ರತಾ ಮಂಡಳಿ ಸಭೆಯೊಂದರ ಅಧ್ಯಕ್ಷತೆ ವಹಿಸಿದಂತಾಗುತ್ತದೆ ಎಂದು ವಿಶ್ವಸಂಸ್ಥೆ ವಕ್ತಾರ ಸ್ಟೀಫನ್ ದುಜಾರಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಮೆರಿಕವು ಮಾರ್ಚ್ ಅವಧಿಗೆ ಭದ್ರತಾ ಮಂಡಳಿ ಅಧ್ಯಕ್ಷತೆ ವಹಿಸಿಕೊಳ್ಳಲಿದೆ. ಬಳಿಕ, ‘ವಿಶ್ವದ ಶಾಂತಿ ಮತ್ತು ಸಹಿಷ್ಣುತೆಯನ್ನು ಮುನ್ನಡೆಸುವಲ್ಲಿ ಶಿಕ್ಷಣದ ಪಾತ್ರ’ ಕುರಿತು ನಡೆಯಲಿರುವ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಮೆಲಾನಿಯಾ ವಹಿಸಿಕೊಳ್ಳುವರು.
‘ಸಂಘರ್ಷದಲ್ಲಿ ಮಕ್ಕಳು’ ಎಂಬುದು ಮೆಲಾನಿಯಾ ಅವರು ಪ್ರಸ್ತಾಪಿಸಿರುವ ಪ್ರಮುಖ ವಿಚಾರವಾಗಿದೆ. ಕಳೆದ ವರ್ಷ ಇದೇ ವಿಚಾರವಾಗಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೂ ಅವರು ಪತ್ರ ಬರೆದಿದ್ದರು. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಪೋಷಕರಿಂದ ಬೇರ್ಪಟ್ಟ ಮಕ್ಕಳನ್ನು ಮತ್ತೆ ಕುಟುಂಬಗಳಿಗೆ ಸೇರಿಸುವ ಪ್ರಯತ್ನಗಳನ್ನೂ ಅಮೆರಿಕ ಘೋಷಿಸಿತ್ತು. ಈ ಬಾರಿಯೂ ಸಭೆಯಲ್ಲಿ ಇದೇ ವಿಚಾರ ಮುನ್ನಲೆಗೆ ಬರುವ ನಿರೀಕ್ಷೆ ಇದೆ.ವಿಶ್ವ ಆರೋಗ್ಯ ಸಂಸ್ಥೆ ಸೇರಿ ವಿಶ್ವಸಂಸ್ಥೆಯ ವಿವಿಧ ಸಂಘಟನೆಗಳಿಂದ ಟ್ರಂಪ್ ಆಡಳಿತ ಹೊರಬಂದಿದೆ. ಇದರ ನಡುವೆಯೇ, ಈಗ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ.

Leave a Reply

Your email address will not be published. Required fields are marked *

error: Content is protected !!