ಉದಯವಾಹಿನಿ, ನವದೆಹಲಿ: ಇರಾನ್‌ – ಅಮೆರಿಕ – ಇಸ್ರೇಲ್‌ ದಾಳಿ-ಪ್ರತಿದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ದಾಳಿಯ ನಂತರ ಭಾರತದಲ್ಲಿ ಸಂಭಾವ್ಯ ಹಿಂಸಾಚಾರದ ಬಗ್ಗೆ ಕೇಂದ್ರ ಗೃಹಸಚಿವಾಲಯ (MHA) ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ಪತ್ರ ಬರೆದಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆ.28 ರಂದು ಕಳುಹಿಸಲಾದ ಸುತ್ತೋಲೆಯಲ್ಲಿ, ದೇಶದಲ್ಲಿ ಹಿಂಸಾಚಾರ ಸಂಭವಿಸುವ ಸಾಧ್ಯತೆಯಿದೆ. ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಭದ್ರತಾ ಸಂಸ್ಥೆಗಳು ಜಾಗರೂಕತೆಯಿಂದ ಇರಬೇಕು. ಅಶಾಂತಿಯನ್ನ ಪ್ರಚೋದಿಸುವ ಇರಾನ್‌ ಪರ ಮೂಲಭೂತ ಪ್ರಚಾರಕರನ್ನ ಪತ್ತೆ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.

ಇರಾನ್‌ ಪರವಾದ ಮೂಲಭೂತ ಪ್ರಚಾರಕರನ್ನ ಗುರುತಿಸಿ: ಫೆಬ್ರವರಿ 28 ರಂದು ಗೃಹ ಸಚಿವಾಲಯ ಹೊರಡಿಸಿದ ಸುತ್ತೋಲೆಯ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದೇಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಅದ್ರಲ್ಲೂ ವಿಶೇಷವಾಗಿ ಧಾರ್ಮಿಕ ಕೂಟಗಳಲ್ಲಿ ಉದ್ರೇಕಿತ ಭಾಷಣಗಳ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಾಧ್ಯತೆಗಳಿವೆ. ಹೀಗಾಗಿ ರಾಜ್ಯ ಸರ್ಕಾರಗಳು ಮತ್ತು ಭದ್ರತಾ ಸಂಸ್ಥೆಗಳು ಎಚ್ಚರಿಕೆಯಿಂದಿರಬೇಕು. ಅಶಾಂತಿ ಮತ್ತು ಉದ್ವಿಗ್ನತೆ ಉಂಟು ಮಾಡುವ ಇರಾನ್‌ ಪರವಾದ ಮೂಲಭೂತ ಪ್ರಚಾರಕರನ್ನ ಗುರುತಿಸಿ ಮೇಲ್ವಿಚಾರಣೆ ಮಾಡಬೇಕು ಎಂದು ಪತ್ರದಲ್ಲಿ ಎಚ್ಚರಿಸಿದೆ.
ಅಲ್ಲದೇ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸಲು ಗುಪ್ತಚರ ಸಂಸ್ಥೆಗಳು ಭದ್ರತಾ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಿ ಹೇಳಿದೆ. ಇದರೊಂದಿಗೆ ಸ್ಥಳೀಯರ ಭಾವನೆಗಳನ್ನು ಕೆರಳಿಸಲು ಜಾಗತಿಕ ಬೆಳವಣಿಗೆಗಳನ್ನು ಬಳಸಿಕೊಳ್ಳುವ ಅಪಾಯಗಳ ಬಗ್ಗೆಯೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಧಾರ್ಮಿಕ ಕೂಟಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ದೆಹಲಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯುದ್ಧಪೀಡಿತ ಸ್ಥಳಗಳಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ ಖಚಿತಪಡಿಸಿಕೊಳ್ಳುವ ಬಗ್ಗೆಯೂ ಸುತ್ತೋಲೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!