ಉದಯವಾಹಿನಿ, ಮಹಾರಾಷ್ಟ್ರ : ಬರಪೀಡಿತ ಪ್ರದೇಶ ಬೀಡ್ ಜಿಲ್ಲೆಯ ಅಷ್ಟಿ ತಾಲೂಕಿನ ಯುವ ರೈತನೋರ್ವ ತಮ್ಮ ಬಳಿ ಇದ್ದ ಅಲ್ಪ ಜಮೀನಿನಲ್ಲೇ ಉತ್ತಮ ದ್ರಾಕ್ಷಿ ಬೆಳೆದು ಇತರರಿಗೂ ಮಾದರಿಯಾಗಿದ್ದಾರೆ. ಟಕಲ್ ಸಿಂಗ್ ಗ್ರಾಮದ ಅಗಂದ್ ಜಗ್ತಾಪ್ ಮಾದರಿಯಾದ ರೈತ.
ಅಷ್ಟಿ ತಾಲೂಕು ಬರಗಾಲ ಪೀಡಿತ ಪ್ರದೇಶವೆಂದು ಹೆಸರುವಾಸಿ. ಗೊತ್ತಿದ್ದರೂ ಯಾವುದೋ ಒಂದು ಉತ್ಸಾಹದಲ್ಲಿ 3 ಲಕ್ಷ ರೂಪಾಯಿ ಖರ್ಚು ಮಾಡಿ ನನ್ನ ಬಳಿ ಇದ್ದ 60 ಗುಂಟೆಗಳಲ್ಲಿ ದ್ರಾಕ್ಷಿ ನೆಟ್ಟಿರುವೆ. ಉತ್ತಮ ಇಳುವರಿ ಇದೆ. ಸುಮಾರು 25 ಲಕ್ಷ ರೂಪಾಯಿ ಲಾಭ ಬರುವ ನಿರೀಕ್ಷೆ ಇದೆ. ಎಷ್ಟೋ ರೈತರು ಈ ಭೂಮಿಯಲ್ಲಿ ಇಂತಹ ಬೆಳೆ ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಗಂದ್ ಜಗ್ತಾಪ್ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಕೃಷಿ ಹೊಂಡ ನಿರ್ಮಿಸಿ ಚಮತ್ಕಾರ: ಈ ಭೂಮಿಯಲ್ಲಿ ನೀರಿನ ಸಮಸ್ಯೆ ಇರುವುದರಿಂದ ಮೊದಲು ಅದನ್ನು ಬಗೆಹರಿಸುವ ನಿರ್ಧಾರ ಮಾಡಿದೆ. ಅದರಂತೆ ಕೃಷಿ ಇಲಾಖೆಯ ಅಡಿ 34×34 ಕೃಷಿ ಹೊಂಡಗಳನ್ನು ನಿರ್ಮಿಸಿದೆ. ನೀರು ಕೂಡ ಭರ್ತಿ ಆಯಿತು. ನಂಬಿಕೆ ಯಾವತ್ತೂ ಹುಸಿಯಾಗದು ಎಂದು ದ್ರಾಕ್ಷಿ ನೆಟ್ಟೆವು. ಹನಿ ನೀರಾವರಿ ಮೂಲಕ ನೀರು ನೀಡಿದೆ.
ಈ ಮೂಲಕ ನೀರಿನ ಸಮಸ್ಯೆಯನ್ನು ಪರಿಹರಿಸಿದೆ. ಅದರ ಫಲವಾಗಿ ಈ ವರ್ಷ, 25 ಟನ್ ದ್ರಾಕ್ಷಿಯನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಇದು ಈ ಭೂಮಿಗೆ ಹೆಚ್ಚೆಂದೇ ಹೇಳಬಹುದು. ಹಾಗಾಗಿ ಲಾಭದ ನಿರೀಕ್ಷೆಯಲ್ಲಿರುವೆ ಎನ್ನುತ್ತಾರೆ ಅಗಂದ್. ಅಷ್ಟಿ ತಾಲೂಕು ಬರಗಾಲ ಪೀಡಿತ ತಾಲೂಕು ಎಂದು ಕರೆಯಲ್ಪಡುತ್ತಿದ್ದರೂ, ನಾನು ಈ ತಾಲೂಕಿನಲ್ಲಿ ದ್ರಾಕ್ಷಿಯನ್ನು ನೆಡುವ ಮೂಲಕ ಹೊಸ ಪ್ರಯೋಗವನ್ನು ಮಾಡಿದ್ದೇನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ದ್ರಾಕ್ಷಿ ಸೇರಿದಂತೆ ಬೇರೆ ಬೇರೆ ಬೆಳೆ ಬೆಳೆಯುತ್ತಿರುವೆ. ಈ ವರ್ಷ ದ್ರಾಕ್ಷಿ ಉತ್ತಮ ಫಲ ನೀಡಿದೆ. ನನ್ನ ಶ್ರಮಕ್ಕೆ ಉತ್ತಮ ಪ್ರತಿಫಲ ಬರುವ ನಿರೀಕ್ಷೆ ಇದೆ. ಹಾಗಾಗಿ ಖುಷಿಯಾಗಿದ್ದೇನೆ. ರೈತರು ಕೂಡ ಸಾಂಪ್ರದಾಯಿಕ ಬೆಳೆಗಳನ್ನು ಮಾತ್ರ ಬೆಳೆಯದೇ ಆಗಾಗ್ಗೆ ಇಂತಹ ವಾಣಿಜ್ಯ ಬೆಳೆಗಳತ್ತ ಗಮನ ನೀಡಬೇಕು ಎಂದು ಅಗಂದ್ ಅವರು ರೈತರಿಗೆ ಕೆಲವು ಸಲಹೆಗಳನ್ನು ನೀಡಿದರು.
