ಉದಯವಾಹಿನಿ, ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಘಟನೆಗೆ ನಾವು ಹೊಣೆಯಲ್ಲ ಎಂದು ಆರ್‌ಸಿಬಿ ಪರ ವಕೀಲರು ವಾದಿಸಿದ್ದಾರೆ. ಚಿನ್ನಸ್ವಾಮಿ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ರದ್ದು ಕೋರಿ ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಹೈಕೋರ್ಟ್‌ನಲ್ಲಿಂದು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ಸರ್ಕಾರ ಪರ ವಕೀಲರಾದ ಎಸ್‌ಪಿಪಿ ಬಿ.ಟಿ.ವೆಂಕಟೇಶ್ ಅವರು ಪ್ರಕರಣದ ಚಾರ್ಜ್‌ಶೀಟ್ ಸಿದ್ಧವಾಗಿದೆ. ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದು, ಬಳಿಕ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಎಸ್‌ಪಿಪಿ ಬಿ.ಟಿ.ವೆಂಕಟೇಶ್ ಅವರ ಮನವಿಗೆ ಆರ್‌ಸಿಬಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ಅಂತಿಮ ವರದಿ ಸಲ್ಲಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶವಿದೆ. ಹೀಗಾಗಿ ಎಫ್‌ಐಆರ್ ರದ್ದು ಕೋರಿರುವ ನಮ್ಮ ವಾದ ಪರಿಗಣಿಸಬೇಕು. ಸ್ಟೇಡಿಯಂ ಹೊರಗಡೆ ನಡೆದ ಘಟನೆಗೆ ಸಂಸ್ಥೆಗಳನ್ನು ಹೊಣೆ ಮಾಡಬಾರದು. ಅರ್ಜಿ ತೀರ್ಮಾನಿಸದೇ ಆರೋಪಪಟ್ಟಿಗೆ ಅನುಮತಿ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅಂತಿಮ ವಿಚಾರಣೆಯನ್ನು ಮಾ.16ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಅಂತಿಮ ವರದಿ ಸಲ್ಲಿಸದಂತೆ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿದೆ. ಇದೇ ವೇಳೆ ಮಾ.14ರೊಳಗೆ ಕೋರ್ಟ್‌ಗೆ ಆಕ್ಷೇಪಣೆ ಹಾಗೂ ದಾಖಲೆ ಸಲ್ಲಿಸಲು ಸೂಚನೆ ನೀಡಿದೆ.
