ಉದಯವಾಹಿನಿ, ಶ್ರೀನಗರ (ಜಮ್ಮು ಮತ್ತು ಕಾಶ್ಮೀರ್): ಕಣಿವೆ ರಾಜ್ಯವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ನೀರಿನ ಬಿಕ್ಕಟ್ಟಿನ ಸಮಸ್ಯೆ ಎದುರಾಗಿದೆ. ಚಳಿಗಾಲದಲ್ಲಿನ ಶುಷ್ಕ ವಾತಾವರಣದಿಂದ ನೀರಿನ ಕೊರತೆ ಉಂಟಾಗುತ್ತಿದ್ದು, ಕುಡಿಯುವ ನೀರಿನ ಮಾಲಿನ್ಯದಿಂದಾಗಿ ನೀರಿನಿಂದ ಹರಡುವ ರೋಗಗಳು ಹೆಚ್ಚಾಗಿವೆ. ಜಮ್ಮು ಸರ್ಕಾರಿ ವೈದ್ಯಕೀಯ ಕಾಲೇಜ್​ (ಜಿಎಂಸಿ)ಯ ಸೂಕ್ಷ್ಮ ಜೀವವಿಜ್ಞಾನ ವಿಭಾಗ ನೀಡಿರುವ ದತ್ತಾಂಶದಂತೆ, ಜಮ್ಮು ಪ್ರಾಂತ್ಯದ ವಿವಿಧೆಡೆ ಸಂಗ್ರಹಿಸಿದ್ದ ಶೇ. 65ರಷ್ಟು ನೀರಿನ ಮಾದರಿಗಳು ಮಾಲಿನ್ಯ ಮತ್ತು ಮಾನವ ಬಳಕೆಗೆ ಯೋಗ್ಯವಾಗಿಲ್ಲ ಎಂದು ವರದಿಯಾಗಿದೆ.

2025ರ ಜನವರಿ ಮತ್ತು 2026ರ ಫೆಬ್ರವರಿ ಮೊದಲ ವಾರದಲ್ಲಿ ಜಮ್ಮು ಪ್ರದೇಶದ ವಿವಿಧ ಸ್ಥಳಗಳಲ್ಲಿ 606 ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 399 ಬಳಕೆಗೆ ಯೋಗ್ಯವಲ್ಲ ಎಂದು ದತ್ತಾಂಶ ತೋರಿಸಿದೆ. ಈ ಮಾದರಿಗಳನ್ನು ಶಾಲೆ, ಹೋಟೆಲ್​, ಗಡಿ ಪ್ರದೇಶ, ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್​ ವಿಭಾಗದಲ್ಲಿ ಅಳವಡಿಕೆಯಿಂದ ಸಂಗ್ರಹಿಸಲಾಗಿದೆ.ಪರೀಕ್ಷೆಯ ವೇಳೆ ಬಹುತೇಕ ನೀರಿನ ಮಾದರಿಗಳಲ್ಲಿ ಹಾನಿಕಾರಕ ಇ. ಕೋಲಿ ಬ್ಯಾಕ್ಟಿರೀಯಾಗಳು ಕಂಡು ಬಂದಿದೆ. ಇದರಿಂದಾಗಿ ಇವು ಕುಡಿಯಲು ಯೋಗ್ಯವಲ್ಲ. ಈ ಬ್ಯಾಕ್ಟೀರಿಯಾ ನೀರಿನಿಂದ ಹರಡುವ ರೋಗಗಳಿಗೆ ಕಾರಣವಾಗಿದೆ. ಈ ರೀತಿಯ ಸಾಂಕ್ರಾಮಿಕ ಹರಡುವ ಭೀತಿಯನ್ನು ಇದು ಹುಟ್ಟುಹಾಕಿದೆ ಎಂದು ಇಲಾಖೆಯ ಅಧಿಕಾರಿಗಳು ಈಟಿವಿ ಭಾರತ್​​ಗೆ ತಿಳಿಸಿದ್ದಾರೆ.

2025ರ ಜನವರಿಯಿಂದ ವರ್ಷಾಂತ್ಯದವರೆಗೆ 502 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 342 ಮಾದರಿಗಳು ಅತೃಪ್ತಿದಾಯಕವಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹದ ಬಳಿಕ ಸೆಪ್ಟಂಬರ್​ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಮಾಲಿನ್ಯ ಪತ್ತೆಯಾಗಿದ್ದು, ಜಮ್ಮು ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಸಂಗ್ರಹಿಸಿದ್ದ 126 ಮಾದರಿಗಳನ್ನು 89ರಲ್ಲಿ ಮಾಲಿನ್ಯ ಕಂಡುಬಂದಿದೆ ಎಂದು ದತ್ತಾಂಶ ತಿಳಿಸಿದೆ.ಈ ವರ್ಷ ಫೆ. 8ರಂದು ಸರಿಸುಮಾರು 104 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 57ರಲ್ಲಿ ಇ. ಕೋಲಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.

 

Leave a Reply

Your email address will not be published. Required fields are marked *

error: Content is protected !!