ಉದಯವಾಹಿನಿ, ಬೆಂಗಳೂರು: ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 1.15 ಲಕ್ಷ ಕೋಟಿ ರೂ. ಸಾಲ ಮಾಡಿ, ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯೂ ಜನರ ಮೇಲೆ ತೆರಿಗೆಗಳ ಹೊರೆ ಹಾಕುವುದು ಖಚಿತ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಂದರೆ ತೆರಿಗೆ ಹೇರುವ ರಾಮಯ್ಯ ಆಗಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆಗಳ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ತಿಂಗಳಿಗೆ ನಾಲ್ಕರಂತೆ ತೆರಿಗೆ ಹಾಕುತ್ತಾರೆ. ಈಗಾಗಲೇ 36 ತೆರಿಗೆಗಳನ್ನು ಜನರ ಮೇಲೆ ಹೇರಿದ್ದಾರೆ. ಚುನಾವಣೆಗೆ ಮುನ್ನ ಜನರ ಮೇಲೆ ಹೊರೆ ಹಾಕದೇ ಗ್ಯಾರಂಟಿ ತರುತ್ತೇವೆ ಎಂದು ಭರವಸೆ ನೀಡಿ, ಈಗ ತೆರಿಗೆಗಳ ಹೊರೆ ಹೇರಿದ್ದಾರೆ. ಸಿದ್ದರಾಮಯ್ಯನವರ ಅವಧಿ ಮುಗಿಯುವ ವೇಳೆಗೆ ಒಟ್ಟು ಸಾಲ 8 ಲಕ್ಷ ಕೋಟಿ ರೂ. ಮೀರಲಿದೆ. ಇದರಿಂದಾಗಿ ಆರ್ಥಿಕ ಶಿಸ್ತು ಮೀರಿ ಹೋಗುತ್ತದೆ. ಇದು ಅವರ ಕಣ್ಕಟ್ಟು ವಿದ್ಯೆ ಎಂದಿದ್ದಾರೆ
