ಉದಯವಾಹಿನಿ, ಬೆಂಗಳೂರು: ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ. ಒಂದಿಬ್ಬರು ಕೇಳಿದ ಹಿನ್ನೆಲೆಯಲ್ಲಿ ಅವರಿಗೆ ಅನುದಾನ ನೀಡಿದ್ದೇವೆ. ಈ ಯೋಜನೆ ಕೆಲಸ ನಡೆಯಲಿದೆ. ತಲೆಕೆಡಿಸಿಕೊಳ್ಳುವುದು ಬೇಡ. ಇದೇ ವೇಳೆ ಸತ್ತೇಗಾಲದಿಂದ ನೀರು ಬರುವುದು ಯಾವಾಗ ಎಂದು ಕೇಳಿದಾಗ, ಕಾಲುವೆ ಕಾಮಗಾರಿ ನಡೆಯುತ್ತಿದ್ದು, ನಾನು ಕಾಮಗಾರಿ ಸ್ಥಳಕ್ಕೂ ಭೇಟಿ ನೀಡಿದ್ದೇನೆ. ಆ ಕೆಲಸ ಕೂಡ ಆಗಲಿದೆ ಎಂದರು.
ವಿದೇಶಕ್ಕೆ ತೆರಳಿದ್ದ ಶಾಸಕರು ವಾಪಸ್ಸಾಗಿದ್ದು, ನಿಮ್ಮನ್ನು ಭೇಟಿ ಮಾಡಿದ್ದಾರಾ ಎಂದು ಕೇಳಿದಾಗ, ಬಂದು ಭೇಟಿ ಮಾಡುತ್ತಿದ್ದಾರೆ. ಪ್ರವಾಸದಲ್ಲಿ ಏನೆಲ್ಲಾ ನೋಡಿದರು ಎಂದು ತಿಳಿಸುತ್ತಿದ್ದಾರೆ ಎಂದು ತಿಳಿಸಿದರು.
ಬಜೆಟ್ ಬಗ್ಗೆ ಕೇಳಿದಾಗ, ನಮ್ಮ ಜಿಲ್ಲೆಯ ಕೆಲಸಗಳು ಬಜೆಟ್ ಮೇಲೆ ನಿಂತಿಲ್ಲ. ಬೇರೆಯವರಿಗೆ ಬಜೆಟ್ ಬೇಕಾಗಿರಬಹುದು, ನಮಗೆ ಬೇಡ. ಪೆನ್ನು ಪೇಪರ್ ನನ್ನ ಹತ್ತಿರವಿದೆ. ಜಿಲ್ಲೆಯ ಜನ ಬಜೆಟ್‌ನಿಂದ ಏನು ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಕೇಳಿದಾಗ, ಬಜೆಟ್ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಬಜೆಟ್ ಇರಲಿ, ಇಲ್ಲದಿರಲಿ, ನಾವು ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುತ್ತೇವೆ. ಇಡೀ ದೇಶದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಾತ್ರ ಒಂದು ಶಾಲೆಗೆ 15 ಕೋಟಿ ರೂ. ವೆಚ್ಚದಂತೆ 25 ಕೆಪಿಎಸ್ ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ನಾವು ಬಜೆಟ್‌ನಲ್ಲಿ ಬರೆಸಿದ್ದೇವಾ? ಈ ಯೋಜನೆ ಸೃಷ್ಟಿಕರ್ತರು ನಾವೇ. ಇಡೀ ರಾಜ್ಯದಲ್ಲಿ ಈ ಯೋಜನೆ ವಿಸ್ತರಿಸಲು ಹೊಸ ನೀತಿ ರೂಪಿಸಿದ್ದೇವೆ. ರಾಜ್ಯದೆಲ್ಲೆಡೆ 2 ಸಾವಿರ ಶಾಲೆಗಳ ನಿರ್ಮಾಣ ಮಾಡುವ ಗುರಿ ಇದೆ.
