ಉದಯವಾಹಿನಿ, ಕರ್ನೂಲ್(ಆಂಧ್ರ ಪ್ರದೇಶ): ಹೋಳಿ ಹಬ್ಬ ಕಾಮ ದಹನ ಮತ್ತು ಬಣ್ಣಗಳ ಆಚರಣೆಯೊಂದಿಗೆ ಸಂಬಂಧಿಸಿದ ಹಬ್ಬ ಎಂಬುದು ಎಲ್ಲರಿಗೂ ಗೊತ್ತಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲಾ ವಯಸ್ಸಿನವರೂ ಈ ಹಬ್ಬವನ್ನು ಬಹಳ ಸಂತೋಷದಿಂದ ಆಚರಿಸುತ್ತಾರೆ. ಬಣ್ಣಗಳನ್ನು ಹಚ್ಚುವ, ಎರಚುವ ಮೂಲಕ ಪರಸ್ಪರ ಸಂಭ್ರಮಿಸುತ್ತಾರೆ. ಕೆಲವು ಸ್ಥಳಗಳಲ್ಲಿ ಜನರು ಮಡಿಕೆಗಳನ್ನು ಒಡೆಯುವ ಮೂಲಕವೂ ಆಚರಿಸುತ್ತಾರೆ. ಹೀಗಾಗಿ, ವಿವಿಧ ಪ್ರದೇಶಗಳಲ್ಲಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ.
ಹೋಳಿ ಇಲ್ಲಿ ವಿಶೇಷ!: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿ ತಾಲೂಕಿನ ಸಂತೆಕುಡ್ಲೂರು ಗ್ರಾಮದ ನಿವಾಸಿಗಳು ಹೋಳಿ ಸಮಯದಲ್ಲಿ ವಿಶಿಷ್ಟ ಸಂಪ್ರದಾಯವನ್ನು ಅನುಸರಿಸುತ್ತಾರೆ. ಇಲ್ಲಿ ಹೋಳಿ ದಿನದಂದು ಪುರುಷರು ಮಹಿಳೆಯರಂತೆ ವಸ್ತ್ರ ಧರಿಸುತ್ತಾರೆ. ಸೀರೆಯುಟ್ಟು, ಆಭರಣ ಧರಿಸಿ, ತಲೆಗೆ ಹೂವುಗಳಿಂದ ಅಲಂಕರಿಸಿಕೊಳ್ಳುತ್ತಾರೆ. ನಂತರ ರತಿ ಮತ್ತು ಮನ್ಮಥನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಆಚರಣೆಗಳನ್ನು ಮಾಡುವುದರಿಂದ ಆಸೆಗಳು ಈಡೇರುತ್ತವೆ ಎಂಬುದು ಅವರ ನಂಬಿಕೆ.

ಸಂತೆಕುಡ್ಲೂರು ಗ್ರಾಮದಲ್ಲಿ ಹೋಳಿ ಬಂದಾಗಲೆಲ್ಲಾ ಈ ವಿಶಿಷ್ಟ ಪದ್ಧತಿ ‘ಜಂಬಲಕಿಡಿ ಪಂಬ’ ಎಂಬ ತೆಲುಗು ಸಿನಿಮಾದ ದೃಶ್ಯದಂತೆ ಭಾಸವಾಗುತ್ತದೆ. ತಲೆತಲೆಮಾರುಗಳಿಂದ ಬಂದಿರುವ ಸಂಪ್ರದಾಯದ ಭಾಗವಾಗಿ ಪುರುಷರು ಸೀರೆ ಉಟ್ಟು ಮಹಿಳೆಯರಂತೆ ತಮ್ಮನ್ನು ಅಲಂಕರಿಸಿಕೊಳ್ಳುತ್ತಾರೆ. ದೇವಾಲಯಕ್ಕೆ ತೆರಳಿ, ಪ್ರಾರ್ಥನೆ ಸಲ್ಲಿಸುತ್ತಾರೆ. ಮಹಿಳೆಯರಂತೆ ಉಡುಗೆ ತೊಡುವುದು ಮತ್ತು ಪ್ರಾರ್ಥನೆ ಸಲ್ಲಿಸುವುದು ಅವರ ಆಸೆಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ ಎಂಬುದು ಸ್ಥಳೀಯರ ಮಾತು. ಅಷ್ಟೇ ಅಲ್ಲದೇ, ಈ ಸಂಪ್ರದಾಯವನ್ನು ಮುಂದುವರಿಸುವುದರಿಂದ ಉತ್ತಮ ಫಸಲು ಬರುತ್ತದೆ, ಗ್ರಾಮವನ್ನು ಕಷ್ಟಗಳಿಂದ ರಕ್ಷಿಸುತ್ತದೆ ಮತ್ತು ಕುಟುಂಬಗಳನ್ನು ಸಮಸ್ಯೆಗಳಿಂದ ಮುಕ್ತಗೊಳಿಸುತ್ತದೆ ಎನ್ನುತ್ತಾರೆ.ಪ್ರತೀ ವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಈ ವಿಶಿಷ್ಟ ಪದ್ಧತಿಯನ್ನು ವೀಕ್ಷಿಸಲು ಬರುತ್ತಾರೆ. ಈ ಗ್ರಾಮ ಆಂಧ್ರಪ್ರದೇಶ-ಕರ್ನಾಟಕ ಗಡಿಯ ಬಳಿ ಇರುವುದರಿಂದ, ಕರ್ನಾಟಕದ ಅನೇಕ ಭಕ್ತರೂ ಸಹ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ.
“ನಮ್ಮ ಹಿರಿಯರು ಈ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ನಾವೂ ಮುಂದುವರಿಸುತ್ತಿದ್ದೇವೆ. ನಮ್ಮ ಆಸೆಗಳು ಈಡೇರಿದಾಗ, ಈ ಆಚರಣೆಯನ್ನು ಮಾಡುತ್ತೇವೆ. ಹೋಳಿ ದಿನದಂದು ಹಳ್ಳಿಯ ಸುಮಾರು ಶೇ.75ರಷ್ಟು ಪುರುಷರು ಮಹಿಳೆಯರಂತೆ ಉಡುಗೆ ತೊಡುತ್ತಾರೆ. ಹೀಗೆ ಮಾಡುವುದರಿಂದ ಸಂತೋಷ, ಸಮೃದ್ಧಿ ಮತ್ತು ದೈವಿಕ ಆಶೀರ್ವಾದಗಳು ಸಿಗುತ್ತವೆ” ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!