ಉದಯವಾಹಿನಿ, ಬೀದರ್‌: ಕೇಂದ್ರದ ಅನ್ಯಾಯದಿಂದ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಬೀದರ್‌ನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಬಜೆಟ್‌ ವಿಚಾರವಾಗಿ ಸಾಲಾರಾಮಯ್ಯ ಎಂದು ವ್ಯಂಗ್ಯ ಮಾಡಿದ್ದ ಬಿಜೆಪಿ ವಿರುದ್ಧ ಹರಿಹಾಯ್ದರು. ಅವರಿಗೆ ದೇಶ ಮತ್ತು ರಾಜ್ಯವನ್ನ ಆರ್ಥಿಕವಾಗಿ ಹೇಗೆ ನಡೆಸಬೇಕು ಎಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಕೇಂದ್ರ ಸರ್ಕಾರ ನಮ್ಮ 80 ಸಾವಿರ ಕೋಟಿ ರೂ. ಪಾಲನ್ನ ನೀಡಿಲ್ಲ. ಅದರಿಂದಾಗಿ ಸಾಲವಾಗಿದೆ. ಎಎಒ ಯೋಜನೆಯ ಕೇಂದ್ರದ ಪಾಲಾದ 15 ಸಾವಿರ ಕೋಟಿ ರೂ. ನಾವು ಕೊಟ್ಟಿದ್ದೇವೆ. ಪಂಚಾಯಿತಿಗೆ ಕೊಡಬೇಕಾದ 15ನೇ ಹಣಕಾಸಿನ ಪಾಲನ್ನು ಕೂಡಾ ಕೇಂದ್ರ ನೀಡಿಲ್ಲ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳಿಗೆ ನಾವು ಅನುದಾನ ಕೊಡ್ತಿದ್ದೇವೆ. ನಾವು ಸಾಲ ಮಾಡಿದ್ದನ್ನ ಮಾತ್ರ ಹೇಳ್ತಾರೆ. ಮೋದಿಯವರು 200 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಅವರು ಕೂಡಾ ಸಾಲ ಮಾಡೇ ದೇಶ ನಡೆಸುತ್ತಿದ್ದಾರೆ. ಅದನ್ನು ನಡೆಸಲಿಕ್ಕೆ ಅವರೊಬ್ಬರೇ ಬೇಕಾ? ಬಿಜೆಪಿಯವರ ರೀತಿ ಚಿಕ್ಕಮಕ್ಕಳು ಕೂಡಾ ಮಾತನಾಡಲ್ಲ, ಅವರನ್ನ ದೇವರೇ ಕಾಪಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿಯವರು ಫೋನ್‌ ಕದ್ದಾಲಿಕೆ ಆರೋಪ ಮಾಡಿದ್ದ ವಿಚಾರವಾಗಿ, ದಿನ ಅಮಿತ್ ಶಾ ಪಕ್ಕದಲ್ಲೇ ಕೂತ್ಕೋತಾರೆ. ತನಿಖೆ ಮಾಡಲು ಒತ್ತಾಯ ಮಾಡಲಿ. ಸಾಕ್ಷಿಗಳನ್ನು ಕೊಡಲಿ. ಯಾವಾಗ್ಲೂ ಹಿಟ್ ಆಂಡ್ ರನ್ ಮಾಡುವುದು ಅವರಿಗೆ ಘನತೆ ತರುವುದಿಲ್ಲ ಎಂದಿದ್ದಾರೆ

Leave a Reply

Your email address will not be published. Required fields are marked *

error: Content is protected !!