ಉದಯವಾಹಿನಿ, ಬೆಂಗಳೂರು: ವರ್ಗಾವಣೆ ಹಾಗೂ ಪ್ರೊಮೋಷನ್‌ಗಾಗಿ ಗಿಳಿಶಾಸ್ತ್ರದ ಮೋಡಿಗೆ ಮರುಳಾದ ನಗರ ಅಧಿಕಾರಿಯೊಬ್ಬರು 35 ಲಕ್ಷ ರೂ. ಚಿನ್ನಾಭರಣ ಕಳೆದುಕೊಂಡು ಕಣ್ಣೀರು ಹಾಕ್ತಿದ್ದಾರೆ. ಪೂಜೆ ನೆಪದಲ್ಲಿ ಚಿನ್ನಾಭರಣ ಪಡೆದ ಗಿಳಿರಾಮ ಐಟಿ ಅಧಿಕಾರಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ.
ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಇನ್ ಕಮ್ ಟ್ಯಾಕ್ಸ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೆ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತನ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್, ನಿಮ್ಮ ಮುಖ ನೋಡಿ ಜಾತಕ ಭವಿಷ್ಯ ಹೇಳುತ್ತೇನೆ, ನಿಮಗೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದ. ಜೀವನ ಸುಧಾರಣೆಗಾಗಿ ದೊಡ್ಡ ಪೂಜೆ ಮಾಡಿಸಬೇಕೆಂದು ಹೇಳಿ, ಮೊದಲು ಐವತ್ತು ಸಾವಿರ ರೂ. ಹಣ ಪಡೆದು ಪೂಜೆ ಮಾಡಿದ್ದಾನೆ.
ಪೂಜೆಯ ನಂತರವೂ ಪದೇ ಪದೇ ಐಟಿ ಅಧಿಕಾರಿಗೆ ಕರೆ ಮಾಡುತ್ತಿದ್ದ ಶೇಖರ್, ಅವರ ವರ್ಗಾವಣೆ ವಿಚಾರವಾಗಿ ಮಾತನಾಡಿದ್ದಾನೆ. ವರ್ಗಾವಣೆ ಕುರಿತು ಗಿಳಿಶಾಸ್ತ್ರ ಕೇಳಿದಾಗ, ನಿಮ್ಮ ವರ್ಗಾವಣೆಗಾಗಿ ಮತ್ತೊಂದು ದೊಡ್ಡ ಪೂಜೆಯನ್ನು ಮಾಡಬೇಕು, ಅದಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ತೆಗೆದುಕೊಂಡು ಬಾ ಎಂದು ಹೇಳಿದ್ದಾನೆ. ಶೇಖರ್ ಮಾತನ್ನು ನಂಬಿದ ಐಟಿ ಅಧಿಕಾರಿ, 35 ಲಕ್ಷ ರೂ. ಮೌಲ್ಯದ 194 ಗ್ರಾಂ ಚಿನ್ನಾಭರಣ ಮತ್ತು ಒಂದು ಕೆಜಿ 300 ಗ್ರಾಂ ಬೆಳ್ಳಿಯನ್ನು ಆತನಿಗೆ ನೀಡಿದ್ದಾರೆ.
