ಉದಯವಾಹಿನಿ, ಕೋಲ್ಕತ್ತಾ (ಪಶ್ಚಿಮಬಂಗಾಳ): ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯಲ್ಲಿ ಯಾವುದೇ ನೈಜ ಮತದಾರರ ಹೆಸರನ್ನು ತೆಗೆದುಹಾಕಿಲ್ಲ” ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್ ಅವರು ತಿಳಿಸಿದರು. ಮುಂಬರುವ ವಿಧಾನಸಭೆ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ರಾಜಕೀಯ ಪಕ್ಷಗಳು, ಹಿರಿಯ ಪೊಲೀಸ್​ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಇಂದು ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಸಂವಿಧಾನದ ಮಾನದಂಡಗಳ ಅನುಸಾರವೇ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ನಿಜವಾದ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈಬಿಟ್ಟಿಲ್ಲ. ಕೆಲ ರಾಜಕೀಯ ಪಕ್ಷಗಳು ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ಹೇಳಿದರು.
ರಾಜ್ಯಗಳಲ್ಲಿ ಒಂದೇ ರೀತಿಯ ಎಸ್​ಐಆರ್​: ಮತಪಟ್ಟಿ ಪರಿಷ್ಕರಣೆಯ ವೇಳೆ 2002ರಲ್ಲಿ ಸಲ್ಲಿಸಿದ ದಾಖಲೆಗಳಿಗೆ ಸರಿಹೊಂದದ ದಸ್ತಾವೇಜುಗಳನ್ನು ಬಿಎಲ್​​ಒಗಳು ಪರಿಶೀಲಿಸಿದ್ದಾರೆ. ಇದು ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಈವರೆಗೂ ಎಸ್​​ಐಆರ್​ ನಡೆದ 12 ರಾಜ್ಯಗಳಲ್ಲಿಯೂ ಇದೇ ಪ್ರಕ್ರಿಯೆ ಅನುಸರಿಸಲಾಗಿದೆ ಎಂದು ಹೇಳುವ ಮೂಲಕ ಬಂಗಾಳದಲ್ಲಿ ಮಾತ್ರ ಈ ನಿಯಮವಿದೆ ಎಂಬ ಆರೋಪವನ್ನು ತಳ್ಳಿಹಾಕಿದರು.
ಬಂಗಾಳದಲ್ಲಿ ಎಸ್​ಐಆರ್​ ಪ್ರಕ್ರಿಯೆ ಕುರಿತು ಮಾತನಾಡಿದ ಅವರು, ರಾಜ್ಯದ ಸುಮಾರು 4-5 ಪ್ರತಿಶತ ಮತದಾರರು 2002ರ ಮತಪಟ್ಟಿಗೆ ದಾಖಲೆಗಳನ್ನು ಲಗತ್ತಿಸಿಲ್ಲ. ಶೇಕಡಾ 7-8ರಷ್ಟು ಮಂದಿ ಉದ್ದೇಶಪೂರ್ವಕವಾಗಿ ಅಥವಾ ಅಜಾಗರೂಕರಾಗಿ ದೋಷ ಹೊಂದಿದ್ದಾರೆ. ಹೀಗಾಗಿ ಅವರು ಮತಪಟ್ಟಿಯಲ್ಲಿ ಹೆಸರು ಪಡೆದಿಲ್ಲ ಎಂದು ತಿಳಿಸಿದರು.63 ಲಕ್ಷ ಮತದಾರರ ಹೆಸರು ಕಟ್​: ಫೆಬ್ರವರಿ 28 ರಂದು ಬಿಡುಗಡೆ ಮಾಡಲಾದ ದತ್ತಾಂಶದ ಪ್ರಕಾರ, ಕಳೆದ ವರ್ಷ ನವೆಂಬರ್‌ನಲ್ಲಿ ಪರಿಷ್ಕರಣೆ ಪ್ರಾರಂಭವಾದಾಗಿನಿಂದ ಸುಮಾರು 63.66 ಲಕ್ಷ (ಶೇಕಡಾ 8.3) ಮತದಾರರನ್ನು ಅಳಿಸಲಾಗಿದೆ. ಹೀಗಾಗಿ, ಮತದಾರರ ಸಂಖ್ಯೆಯು ಈ ಹಿಂದೆ ಇದ್ದ 7.66 ಕೋಟಿಯಿಂದ 7.04 ಕೋಟಿಗೆ ಇಳಿಕೆ ಕಂಡಿದೆ ಎಂದರು.

 

Leave a Reply

Your email address will not be published. Required fields are marked *

error: Content is protected !!