ಉದಯವಾಹಿನಿ,ಮನಾಮ: ಬಹರೇನ್‌ನ ಪೆಟ್ರೋಲಿಯಂ ಕಾಂಪ್ಲೆಕ್ಸ್ ಒಳಗೊಂಡಂತೆ ಗಲ್ಫ್ ದೇಶಗಳ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಇರಾನ್ ಸೋಮವಾರ ದಾಳಿ ನಡೆಸಿದೆ. ಮೊಜ್ಜಬಾ ಖಮೇನಿ ಅವರು ಪರಮೋಚ್ಚ ನಾಯಕರಾಗಿ ನೇಮಕಗೊಂಡ ಬೆನ್ನಲ್ಲೇ ಇರಾನ್, ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಇಸ್ರೇಲ್ ಸೇನೆಯು ಟೆಹರಾನ್‌ನ ತೈಲ ಸಂಗ್ರಹಾಗಾರಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್, ಗಲ್ಫ್ ದೇಶಗಳ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಿದೆ.
ಮತ್ತೊಂದೆಡೆ ಇಸ್ರೇಲ್-ಅಮೆರಿಕ ಸೇನೆಗಳು ಇರಾನ್ ಮೇಲಿನ ದಾಳಿಯನ್ನು ಮುಂದುವರಿಸಿವೆ. ಟೆಹರಾನ್, ಇಸ್ಪೃಹಾನ್ ಮತ್ತು ದಕ್ಷಿಣ ಇರಾನ್‌ನ ವಿವಿಧ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಸೋಮವಾರ ಬೆಳಗಿನ ಜಾವ ಟೆಹರಾನ್‌ಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಹಿಜ್ಜುಲ್ಲಾ ವಿರುದ್ಧ ಲೆಬನಾನ್‌ನಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯನ್ನೂ ಇಸ್ರೇಲ್ ಸೇನೆ ಮುಂದುವರಿಸಿದೆ.
ಬಹರೇನ್‌ನ ಅತಿದೊಡ್ಡ ‘ಅಲ್ ಮಾಮೀರ್’ ತೈಲ ಸಂಸ್ಕರಣಾ ಘಟಕದಲ್ಲಿ ಕ್ಷಿಪಣಿ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿದ್ದು, ಹಾನಿ ಉಂಟಾಗಿದೆ. ಗುತ್ತಿಗೆ ಒಪ್ಪಂದಗಳಿಗೆ ಅನುಗುಣವಾಗಿ ತೈಲ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ಬಹರೇನ್‌ನ ಸರ್ಕಾರಿ ಸ್ವಾಮ್ಯದ ಬಾಮ್ಮೊ ಎನರ್ಜಿಸ್ ಸಂಸ್ಥೆ ಹೇಳಿದೆ. ಕತಾರ್ ಮತ್ತು ಕುವೈತ್‌ನ ಕಂಪನಿಗಳು ಕೂಡಾ ಈ ಹಿಂದೆ ಇಂತಹದೇ ಘೋಷಣೆ ಮಾಡಿದ್ದವು.

ದೇಶದ ನೈರುತ್ಯ ಭಾಗದಲ್ಲಿರುವ ಶೈಬಾ ತೈಲ ಉತ್ಪಾದನಾ ಘಟಕವನ್ನು ಗುರಿಯಾಗಿಸಿ ಇರಾನ್ ನಡೆಸಿದ ಡೋನ್ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ದೋಹಾ ಹಾಗೂ ಮನಾಮದಲ್ಲೂ ಸ್ಫೋಟದ ಸದ್ದು ಕೇಳಿಬಂದಿವೆ.
ಬಹರೇನ್‌ನ ಸಿತ್ರಾ ದ್ವೀಪದ ಜನವಸತಿ ಪ್ರದೇಶಕ್ಕೆ ಡೋನ್ ಅಪ್ಪಳಿಸಿದ್ದರಿಂದ 32 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲರೂ ಬಹರೇನ್ ಪ್ರಜೆಗಳಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಇರಾನ್ ಹಾರಿಸಿದ 17 ಕ್ಷಿಪಣಿಗಳು ಮತ್ತು ಡೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಕತಾರ್ ಹೇಳಿದೆ. ತನ್ನ ವಾಯು ರಕ್ಷಣಾ ವ್ಯವಸ್ಥೆಯು 15 ಕ್ಷಿಪಣಿಗಳನ್ನು ಗುರುತಿಸಿದ್ದು, ಅವುಗಳಲ್ಲಿ 12ನ್ನು ಹೊಡೆದುರುಳಿಸಿದೆ. ಮೂರು ಕ್ಷಿಪಣಿಗಳು ಸಮುದ್ರಕ್ಕೆ ಬಿದ್ದವು ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ಅಬುಧಾಬಿಯಲ್ಲಿ ಕ್ಷಿಪಣಿಯ ಅವಶೇಷ ಬಿದ್ದು ಇಬ್ಬರು ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!