
ಉದಯವಾಹಿನಿ, ರಾಯಚೂರು: ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಒಳಮೀಸಲಾತಿ ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ರಾಯಚೂರು ಬಂದ್‌ಗೆ ಇಂದು ಉತ್ತಮ ಸ್ಪಂದನೆ ದೊರೆಯಿತು.
ಬೆಳಗ್ಗೆಯಿಂದಲೇ ರಾಯಚೂರು ನಗರದಲ್ಲಿ ಬಂದ್ ವಾತಾವರಣ ಕಂಡುಬಂತು. ಅಂಗಡಿ–ಮುಂಗಟ್ಟು, ತರಕಾರಿ ಮಾರುಕಟ್ಟೆ, ಪ್ರಮುಖ ವ್ಯಾಪಾರ ಮಾರುಕಟ್ಟೆಗಳು ಬಂದ್ ಆಗಿದ್ದವು. ಇದರಿಂದ ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತಗೊಂಡಿದ್ದು, ನಗರದ ಪ್ರಮುಖ ಮಾರುಕಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಬಂದ್ ಪರಿಣಾಮ ಸಾರಿಗೆ ವ್ಯವಸ್ಥೆಯ ಮೇಲೂ ಆಯಿತು. ಬಸ್ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡಿದರು. ಆಟೋ ಹಾಗೂ ಖಾಸಗಿ ವಾಹನಗಳ ಸಂಚಾರವೂ ಕಡಿಮೆಯಾಗಿದ್ದು, ರಸ್ತೆಗಳು ಬಹುತೇಕ ಖಾಲಿ ಖಾಲಿಯಾಗಿದ್ದವು.
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಹೋರಾಟಗಾರರು ಕೆಲವೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೆ ಆದೇಶ ನೀಡಿದೆ. ಆದ್ರೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ತರಲು ವಿಳಂಬ ಮಾಡುತ್ತಿದೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ತಕ್ಷಣ ಒಳಮೀಸಲಾತಿ ಜಾರಿಗೊಳಿಸಿ ಸಮಾಜದ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿವಿಧ ಸಂಘಟನೆಗಳು, ಹೋರಾಟಗಾರರು ಮತ್ತು ಸಾರ್ವಜನಿಕರು ಬಂದ್‌ಗೆ ಬೆಂಬಲ ಸೂಚಿಸಿದ್ದು, ರಾಯಚೂರು ನಗರದಲ್ಲಿ ಬಂದ್‌ಗೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ ಎಂದು ಹೋರಾಟ ಸಮಿತಿ ಮುಖಂಡರು ತಿಳಿಸಿದ್ದಾರೆ.
ಹೋರಾಟ ಸಮಿತಿ ಮುಖಂಡ ಎಂ.ವಿರುಪಾಕ್ಷಿ ಮಾತನಾಡಿ, “ಕಳೆದ ಮೂವತ್ತೈದು ವರ್ಷಗಳ ಹೋರಾಟದ ಪ್ರತಿಫಲವಾಗಿ ಸುಪ್ರೀಂ ಕೋರ್ಟ್ ತೀರ್ಪು ನಂತರ ಕರ್ನಾಟಕ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡುವುದಕ್ಕೆ ವಿಳಂಬ ಮಾಡುತ್ತಿರುವುದನ್ನು ಖಂಡಿಸುತ್ತೇವೆ. ಎರಡು ಸದನಗಳಲ್ಲಿ ಒಪ್ಪಿ, ರಾಜ್ಯಪಾಲರ ಅಂಕಿತ ಹಾಕಿದ ನಂತರವೂ ಕೂಡ ಹಳೇ ಮೀಸಲಾತಿ ಅಡಿ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತಿರುವುದು ಕರ್ನಾಟಕದ ಮಾದಿಗ ಪದವೀಧರರಿಗೆ ಮರಣ ಶಾಸನವಾಗಿದೆ” ಎಂದು ಕಿಡಿಕಾರಿದರು.
